ಅನುಷ್ಕಾ ಶರ್ಮಾ, ಅಥಿಯಾ ಶೆಟ್ಟಿ ಕುರಿತು ಹೇಳಿಕೆ: ಹರ್ಭಜನ್​​ ಸಿಂಗ್​ ವಿರುದ್ಧ ತೀವ್ರ ಆಕ್ರೋಶ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಆಥಿಯಾ ಶೆಟ್ಟಿ ಅವರ ಮೇಲೆ ಮಾಡಿದ ಸ್ತ್ರೀ ವಿರೋಧಿ ಕಾಮೆಂಟ್ ಗಾಗಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಆಥಿಯಾ ಶೆಟ್ಟಿ ಅವರ ಮೇಲೆ ಮಾಡಿದ ಸ್ತ್ರೀ ವಿರೋಧಿ ಕಾಮೆಂಟ್ ಗಾಗಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಹಿಂದಿ ವಾಹಿನಿಯ ಕಾಮೆಂಟ್ರಿಯಲ್ಲಿ ಪಂದ್ಯದ ವಿಶ್ಲೇಷಣೆ ಮಾಡುವಾಗ, ಕ್ಯಾಮೆರಾ ಗ್ಯಾಲರಿಯಲ್ಲಿ ಕುಳಿತಿದ್ದ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಹಾಗೂ ಕೆಎಲ್‌ ರಾಹುಲ್‌ ಪತ್ನಿ ಅಥಿಯಾ ಶೆಟ್ಟಿ ಅವರನ್ನು ತೋರಿಸುತ್ತದೆ. ಈ ಹಂತದಲ್ಲಿ ಹಿಂದಿ ಕಾಮೆಂಟ್ರಿ ಬಾಕ್ಸ್‌ನಲ್ಲಿರುವ ಹರ್ಭಜನ್‌ ಸಿಂಗ್‌ ಸ್ತ್ರೀ ವಿರೋಧಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನೇರಪ್ರಸಾರದ ಸಮಯದಲ್ಲಿಯೇ ಇವರಿಬ್ಬರ ಕ್ರಿಕೆಟ್‌ ಜ್ಞಾನದ ಕುರಿತಾಗಿ ಭಜ್ಜಿ ಪ್ರಶ್ನೆ ಮಾಡಿದ್ದಾರೆ.

ಪಂದ್ಯದ ಕಾಮೆಂಟ್ರಿ ವೇಳೆ ಹರ್ಭಜನ್‌ ಸಿಂಗ್‌, 'ಔರ್‌ ಯೇ ಮೇ ಸೋಚ್‌ ರಹಾ ಥಾ ಕೀ ಬಾತ್‌ ಕ್ರಿಕೆಟ್‌ ಕಿ ಹೋ ರಹಿ ಹೇ ಯಾ ಫಿಲ್ಮೋನ್‌ ಕಿ. ಕ್ಯುಂಕೀ ಕ್ರಿಕೆಟ್ ಕೆ ಬಾರೇ ಮೇ ತೋ ಜಾನ್ತಾ ನಹೀ ಕಿತ್ನಿ ಸಮಜ್‌ ಹೋಗಿ (ಇಲ್ಲಿ ಚರ್ಚೆ ನಡೆಯುತ್ತಿರುವುದು ಕ್ರಿಕೆಟ್‌ ಬಗ್ಗೆಯೋ ಸಿನಿಮಾ ಬಗ್ಗೆಯೋ ಎಂದು ನಾನು ಯೋಚಿಸುತ್ತಿದ್ದೆ. ಏಕೆಂದರೆ, ಅವರಿಗೆ ಕ್ರಿಕೆಟ್‌ ಬಗ್ಗೆ ಎಷ್ಟು ಜ್ಞಾನವಿದೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ)' ಎಂದು ಹೇಳಿದ್ದಾರೆ. ಫೈನಲ್‌ ಪಂದ್ಯದಲ್ಲಿ ಆಡುತ್ತಿದ್ದ ತಮ್ಮ ಸಂಗಾತಿಗಳಾದ ವಿರಾಟ್‌ ಕೊಹ್ಲಿ ಹಾಗೂ ಕೆಎಲ್‌ ರಾಹುಲ್‌ ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಇವರಿಬ್ಬರೂ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್‌ ಆದ ಬೆನ್ನಲ್ಲಿಯೇ ಹಿಂದಿ ವಾಹಿನಿಯ ವಿಶ್ಲೇಷಕ ಹರ್ಭಜನ್‌ ಸ್ತ್ರೀ ವಿರೋಧಿ ಕಾಮೆಂಟ್‌ಗಳಿಗೆ ಭಾರಿ ಟೀಕೆ ಎದುರಿಸಿದ್ದಾರೆ. ಎಕ್ಸ್‌ನಲ್ಲಿ ಈ  ವೀಡಿಯೊವನ್ನು ಹಂಚಿಕೊಂಡಿರುವ ಬಳಕೆದಾರರು, ಇವರಿಬ್ಬರ ಕ್ರಿಕೆಟ್‌ ಜ್ಞಾನವನ್ನು ಪ್ರಶ್ನೆ ಮಾಡಿದ ಹರ್ಭಜನ್‌ ಅವರ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಕಾಮೆಂಟೇಟರ್‌ಗಳು ಮುಕ್ತವಾಗಿ ಅನುಷ್ಕಾ ಶರ್ಮ ಅವರ ಕ್ರಿಕೆಟ್‌ ಜ್ಞಾನದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ನಾವು ಯಾವಾಗ ಇದನ್ನೆಲ್ಲಾ ಕಲಿಯುತ್ತೇವೆಯೋ ಗೊತ್ತಿಲ್ಲ. ಅವರು ಕೇವಲ ಅನುಷ್ಕಾ ಮಾತ್ರವೇ ಅಲ್ಲ ಇತ್ತೀಚೆಗೆ ದೊಡ್ಡ ಇತಿಹಾಸವನ್ನೇ ನಿರ್ಮಿಸಿದ ವಿರಾಟ್‌ ಕೊಹ್ಲಿ ಅವರ ಪತ್ನಿ. ಕೋಟಿಗಟ್ಟಲೆ ಜನ ನೋಡುವಾಗ ಯಾರೋ ಒಬ್ಬರನ್ನು ಅಪಹಾಸ್ಯ ಮಾಡುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಒಬ್ಬರು ಬರೆದಿದ್ದಾರೆ.

ವಿಚಾರ ಯಾವುದೇ ಆಗಲಿ ದಿನದಿಂದ ದಿನಕ್ಕೆ ಸ್ತ್ರೀದ್ವೇಷ ಹೆಚ್ಚುತ್ತಿದೆ ಎಂಬುದಕ್ಕೆ ಹರ್ಭಜನ್ ಅವರ ಕಾಮೆಂಟ್‌ಗಳು ನೇರ ಉದಾಹರಣೆಯಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಬೆಂಬಲ ಕೊಡಲು ಬಂದಿರುವ ಅವರಿಗೆ ಕನಿಷ್ಠ ಗೌರವವನ್ನು ನೀಡದಿದ್ದರೆ ಹೇಗೆ? ಚಿತ್ರರಂಗದ ಸೆಲೆಬ್ರಿಟಿಯನ್ನೇ ಸ್ವತಃ ಮದುವೆಯಾಗಿರುವ ಹರ್ಭಜನ್ ಸಿಂಗ್ ಕೋಟಿ ಕೋಟಿ ಜನರ ಎದುರು ಹೀಗೆ ಮಾತನಾಡೋದು ಎಷ್ಟು ಸರಿ? ಇದು ಖಂಡಿತ ಸ್ವೀಕಾರಾರ್ಹವಲ್ಲ ಎಂದು ಮತ್ತೋರ್ವ ಅಭಿಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com