

ನವದೆಹಲಿ: ಸೋಮವಾರ ಚೆನ್ನೈನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಪ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ನ್ನು ಟೀಕಿಸಿರುವ ಮಾಜಿ ನಾಯಕ ವಾಸಿಂ ಅಕ್ರಮ್ , ಪಾಕ್ ಆಟಗಾರರ ಫಿಟ್ ನೆಸ್ ಬಗ್ಗೆ ಕೆಂಡಕಾರಿದ್ದಾರೆ. ಕೆಳ ಶ್ರೇಯಾಂಕದ ಅಫ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಅವರು ಬಾಬರ್ ಅಜಮ್ ಅವರ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಟಗಾರರ ಫಿಟ್ ನೆಸ್ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ದಿನಕ್ಕೆ 8 ಕೆಜಿ ಮಟನ್ ತಿಂತಾರೆ, ಫಿಟ್ ನೆಸ್ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ. ಅಪ್ಘಾನಿಸ್ತಾನ ಎದುರಿನ ಸೋಲಿನಿಂದ ಮುಜುಗರ ಉಂಟಾಗಿದೆ. ಅಪ್ಘನ್ ತಂಡ ಎರಡು ವಿಕೆಟ್ ಕಳೆದುಕೊಂಡು 280 ಕ್ಕೂ ಅಧಿಕ ರನ್ ಬೆನ್ನಟ್ಟಿರುವುದು ದೊಡ್ಡ ಸಾಧನೆಯೇ ಸರಿ ಎಂದಿದ್ದಾರೆ.
ಈ ಪಂದ್ಯದಲ್ಲಿ ಪಾಕ್ ತಂಡದ ಫೀಲ್ಡಿಂಗ್ , ಅವರ ಫಿಟ್ ನೆಸ್ ಮಟ್ಟ ಹೇಗಿತ್ತು ಎಂಬುದನ್ನು ನೋಡಿ. ಇವರು ಎರಡು ವರ್ಷಗಳಿಂದ ಫಿಟ್ ನೆಸ್ ಪರೀಕ್ಷೆ ಎದುರಿಸಿಲ್ಲ ಎಂದು ಕಳೆದ ಮೂರು ವಾರಗಳಿಂದ ಹೇಳುತ್ತಾ ಬಂದಿದ್ದೇನೆ. ಆಟಗಾರರ ವೈಯಕ್ತಿಕ ಹೆಸರುಗಳನ್ನು ತೆಗೆದುಕೊಂಡರೆ, ಅವರು ಅದನ್ನು ಇಷ್ಟಪಡುವುದಿಲ್ಲ. ಈ ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿನ್ನುವಂತೆ ಕಾಣಿಸುತ್ತದೆ. ಫಿಟ್ ನೆಸ್ ಪರೀಕ್ಷೆ ಬೇಡವೇ ಎಂದು ಸ್ಪೋರ್ಟ್ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.
ಪರೀಕ್ಷೆಗಳು ಇರಬೇಕು. ವೃತ್ತಿಪರರಾಗಿ ನೀವು ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ, ನಿಮಗೆ ಸಂಬಳ ನೀಡಲಾಗುತ್ತಿದೆ. ನಾನು ಮಿಸ್ಬಾ ಜೊತೆಗಿದ್ದೇನೆ. ಅವರು ಕೋಚ್ ಆಗಿದ್ದಾಗ, ಅವರು ಆ ಮಾನದಂಡವನ್ನು ಹೊಂದಿದ್ದರು, ಆಟಗಾರರು ಅವರನ್ನು ದ್ವೇಷಿಸುತ್ತಿದ್ದರು ಎಂದು ತಿಳಿಸಿದರು. ಪಾಕಿಸ್ತಾನ ತಂಡ ಶುಕ್ರವಾರ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಲ್ಲಿಯೂ ಸೋತರು ಸೆಮಿಫೈನಲ್ ಪ್ರವೇಶ ಕಷ್ಟವಾಗಲಿದೆ.
Advertisement