ಭಾರತ ಕ್ರಿಕೆಟ್ ತಂಡದ ಬಲಗೈ ಬಾಟ್ಸ್ ಮನ್ ಕೆ ಎಲ್ ರಾಹುಲ್ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಮತ್ತು ಟಿ20 ಕ್ರಿಕೆಟ್ ಸರಣಿಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ತಿಂಗಳಾಂತ್ಯದಲ್ಲಿ ತನ್ನ ಸ್ನೇಹಿತೆ ಅಥಿಯಾ ಶೆಟ್ಟಿ ಜೊತೆ ವಿವಾಹ ಬಂಧನಕ್ಕೊಳಗಾಗಲಿರುವ ರಾಹುಲ್ ಈ ಹಿನ್ನೆಲೆಯಲ್ಲಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.
ಮೂಲಗಳ ಪ್ರಕಾರ, ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರ ವಿವಾಹ ಜನವರಿ 23ರಂದು ಅಥಿಯಾರ ಪೋಷಕರ ನಿವಾಸದಲ್ಲಿ ನೆರವೇರಲಿದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಮತ್ತು ಮನಾ ದಂಪತಿಯ ಬಂಗಲೆ ಖಾಂಡಾಲದಲ್ಲಿದ್ದು ಅಲ್ಲಿಯೇ ಪುತ್ರಿಯ ವಿವಾಹ ನೆರವೇರಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಸದಸ್ಯ ಅಕ್ಸರ್ ಪಟೇಲ್ ಕೂಡ ತನ್ನ ಗರ್ಲ್ ಫ್ರೆಂಡ್ ಮೆಹಾ ಪಟೇಲ್ ಜೊತೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ. ಕಳೆದ ವರ್ಷ ಜನವರಿ 20ರಂದು ಅಕ್ಸರ್ ಹುಟ್ಟುಹಬ್ಬದ ದಿನ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈ ವರ್ಷ ಜನವರಿ 20ರಂದು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆ ಎಲ್ ರಾಹುಲ್ ಮತ್ತು ಅಕ್ಸರ್ ಪಟೇಲ್ ನ್ಯೂಜಿಲ್ಯಾಂಡ್ ಸರಣಿ ಪಂದ್ಯಕ್ಕೆ ವೈಯಕ್ತಿಕ ಕೌಟುಂಬಿಕ ಬದ್ಧತೆ ಕಾರಣದಿಂದ ಲಭ್ಯರಾಗುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಇದೇ ಜನವರಿ 18ರಂದು ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆರಂಭವಾಗುತ್ತಿದ್ದು ರಾಹುಲ್ ಮತ್ತು ಅಕ್ಸರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿಲ್ಲ.
Advertisement