World Cup 2023: ಸೋಲಿನ ಸುಳಿಯಿಂದ ತಂಡವನ್ನು ಹೊರತಂದ ಶಾಹೀನ್, ಫಖರ್; ಬಾಂಗ್ಲಾ ವಿರುದ್ಧ ಪಾಕ್‌ಗೆ 7 ವಿಕೆಟ್‌ ಜಯ

ಶಾಹೀನ್ ಅಫ್ರಿದಿ ಬಲಿಷ್ಠ ಬೌಲಿಂಗ್ ಮತ್ತು ಫಖರ್ ಜಮಾನ್ 81 ರನ್‌ಗಳ ಅಮೋಘ ಇನಿಂಗ್ಸ್‌ನಿಂದ ಪಾಕಿಸ್ತಾನವು ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು. 
ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ
Updated on

ಕೋಲ್ಕತ್ತಾ: ಶಾಹೀನ್ ಅಫ್ರಿದಿ ಬಲಿಷ್ಠ ಬೌಲಿಂಗ್ ಮತ್ತು ಫಖರ್ ಜಮಾನ್ 81 ರನ್‌ಗಳ ಅಮೋಘ ಇನಿಂಗ್ಸ್‌ನಿಂದ ಪಾಕಿಸ್ತಾನವು ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು. 

ಸತತ 4 ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ ತಲುಪುವ ಪಾಕಿಸ್ತಾನದ ಆಸೆ ಇನ್ನೂ ಜೀವಂತವಾಗಿದೆ. ಆದಾಗ್ಯೂ, ಪಾಕಿಸ್ತಾನದ ಭವಿಷ್ಯ ಏನಾಗುತ್ತದೆ ಎಂಬುದು ಇತರ ತಂಡಗಳ ಗೆಲುವು ಅಥವಾ ಸೋಲಿನ ಮೇಲೆ ಅವಲಂಬಿತವಾಗಿರುತ್ತದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಪಂದ್ಯದಲ್ಲಿ ಇಡೀ ಬಾಂಗ್ಲಾದೇಶ ತಂಡ 45.1 ಓವರ್‌ಗಳಲ್ಲಿ ಕೇವಲ 204 ರನ್‌ಗಳಿಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 32.3 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿ ಜಯ ಸಾಧಿಸಿತು.

ಫಖರ್ ಮತ್ತು ಅಬ್ದುಲ್ಲಾ ಪ್ರಬಲ ಬ್ಯಾಟಿಂಗ್
ಪಾಕಿಸ್ತಾನದ ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಖರ್ ಜಮಾನ್ ಮತ್ತು ಅಬ್ದುಲ್ಲಾ ಶಫೀಕ್ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ಇಮಾಮ್ ಉಲ್ ಹಕ್ ಬದಲಿಗೆ ಫಖರ್ ಜಮಾನ್ ಆಡುವ ಅವಕಾಶ ಪಡೆದರು. ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್‌ಗೆ ಬಂದ ಫಖರ್ ಜಮಾನ್ ಅಬ್ದುಲ್ಲಾ ಜೊತೆಗೂಡಿ ಮೊದಲ ವಿಕೆಟ್‌ಗೆ 128 ರನ್‌ಗಳ ಬಲವಾದ ಜೊತೆಯಾಟ ನೀಡಿದರು. ಆದರೆ, ಅಷ್ಟರಲ್ಲಿ ಅಬ್ದುಲ್ಲಾ 69 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಹ ಸಿಡಿಸಿದರು.

ಅಬ್ದುಲ್ಲಾ ಔಟಾದ ನಂತರ, ಫಖರ್ ಜಮಾನ್ ಬಿರುಸಿನ ಆಟ ಮುಂದುವರೆಸಿದರು. ಶತಕ ವಂಚಿತರಾದರೂ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದರು. ಫಖರ್ ಜಮಾನ್ 74 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 2 ಬೌಂಡರಿ ಒಳಗೊಂಡ 81 ರನ್ ಗಳಿಸಿದರು.

ಶಾಹೀನ್ ಅದ್ಭುತ ಬೌಲಿಂಗ್
ಪಾಕಿಸ್ತಾನದ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಅದ್ಭುತ ಪ್ರದರ್ಶನ ನೀಡಿದರು. ಶಾಹೀನ್ 9 ಓವರ್ ಗಳಲ್ಲಿ ಕೇವಲ 23 ರನ್ ನೀಡಿ 3 ವಿಕೆಟ್ ಪಡೆದರು. ಇದರೊಂದಿಗೆ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನೂ ಮಾಡಿದ್ದಾರೆ. ಶಾಹೀನ್ ಅಫ್ರಿದಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅವರು ತಮ್ಮ 51ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೋಲಿನೊಂದಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಿರೀಕ್ಷೆಗೆ ದೊಡ್ಡ ಪೆಟ್ಟು ಬಿದ್ದಿದೆ. ಟೂರ್ನಿಯಲ್ಲಿ ಬಾಂಗ್ಲಾದೇಶಕ್ಕೆ ಇದು ಆರನೇ ಸೋಲು. ಇದರೊಂದಿಗೆ ಅವರ ಸೆಮಿಫೈನಲ್‌ ಹಾದಿಯೂ ಸಂಪೂರ್ಣ ಮುಚ್ಚಿಹೋಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com