ಬಹುಮಾನದ ಹಣವನ್ನು ಕ್ರೀಡಾಂಗಣದ ಸಿಬ್ಬಂದಿಗೆ ನೀಡಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದ ವೇಗಿ ಸಿರಾಜ್!
ಏಷ್ಯಾ ಕಪ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 6 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟ ಮೊಹಮ್ಮದ್ ಸಿರಾಜ್ ಮತ್ತೊಂದು ಕೆಲಸದ ಮೂಲಕ ಕ್ರಿಕೆಟ್ ಪ್ರಿಯರ ಮನಗೆದಿದ್ದಾರೆ.
Published: 18th September 2023 12:13 AM | Last Updated: 18th September 2023 12:15 AM | A+A A-

ಮೊಹಮ್ಮದ್ ಸಿರಾಜ್
ಕೊಲಂಬೊ: ಏಷ್ಯಾ ಕಪ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 6 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟ ಮೊಹಮ್ಮದ್ ಸಿರಾಜ್ ಮತ್ತೊಂದು ಕೆಲಸದ ಮೂಲಕ ಕ್ರಿಕೆಟ್ ಪ್ರಿಯರ ಮನಗೆದಿದ್ದಾರೆ. ಪಂದ್ಯ ಶ್ರೇಷ್ಠ ಗೌರವದ ಜೊತೆಗೆ ಸಿಕ್ಕ ಬಹುಮಾನ ಹಣವನ್ನು ಮಳೆ ನಡುವೆ ಪಿಚ್ ಉಳಿಸುವ ಸಲುವಾಗಿ ಟೂರ್ನಿಯುದ್ದಕ್ಕೂ ಕಷ್ಟ ಪಟ್ಟ ಆರ್ ಪ್ರೇಮದಾಸ ಮೈದಾನದ ಸಿಬ್ಬಂದಿಗೆ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಹೌದು.ಪಂದ್ಯದ ಬಳಿಕ ಸಿರಾಜ್ ಅವರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯ ಬಹುಮಾನದ ಹಣ 5,000 ಯುಎಸ್ ಡಾಲರ್ ಅಥವಾ 4.15 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿ ಮಾತನಾಡಿದ ಸಿರಾಜ್, ಈ ಬಹುಮಾನ ಮೊತ್ತವನ್ನು ನಾನು ಕ್ರೀಡಾಂಗಣದ ಸಿಬ್ಬಂದಿಗೆ ನೀಡುತ್ತೇನೆ. ಅವರು ಇಲ್ಲದೇ ಇದಿದ್ದರೆ ಈ ಟೂರ್ನಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಟೂರ್ನಿ ಅಡೆತಡೆಗಳನ್ನು ಮೆಟ್ಟಿನಿಂತು ಫಲಿತಾಂಶ ಕಂಡಿರುವುದರ ಸಂಪೂರ್ಣ ಶ್ರೇಯಸ್ಸು ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲಬೇಕು ಎಂದು ಹೇಳಿದರು. ಮೊಹಮದ್ ಸಿರಾಜ್ ಅವರ ಈ ಕಾರ್ಯವನ್ನು ಕ್ರಿಕೆಟ್ ಪ್ರೇಮಿಗಳು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು ಎಂದ ಡಿಕೆಶಿ!
ಟೂರ್ನಿಯಲ್ಲಿ ಹಲವು ಪಂದ್ಯಗಳಿಗೆ ಮಳೆ ಕಾಟ ಕೊಟ್ಟಿತ್ತು. ಸೂಪರ್ 4 ಘಟ್ಟದಲ್ಲಿ ಭಾರತ-ಪಾಕಿಸ್ತಾನ ನಡುವಣ ಪಂದ್ಯ ಮಳೆ ಕಾರಣ 2 ದಿನಗಳ ಕಾಲ ಆಯೋಜನೆ ಆಗಿತ್ತು. ಕೊನೆಗೆ ಉಭಯ ತಂಡಗಳಿಗೂ ಪಾಯಿಂಟ್ ನೀಡುವ ಮೂಲಕ ಪಂದ್ಯ ಅಂತ್ಯಗೊಳಿಸಲಾಗಿತ್ತು. ಅದಲ್ಲದೇ ಹಲವು ಪಂದ್ಯಗಳಿಗೆ ವರುಣ ಅಡ್ಡಿಯನ್ನುಂಟು ಮಾಡಿತ್ತು.
ಈ ಸಂದರ್ಭದಲ್ಲಿ ಕ್ರೀಡಾಂಗಣದ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ನಿರ್ವಯಿಸಿ ಅಂಗಣಕ್ಕೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿ. ಪಿಚ್‌ನ ಮಳೆಯಿಂದ ರಕ್ಷಿಸಿದ್ದರು. ಕ್ರೀಡಾಂಗಣದ ಸಿಬ್ಬಂದಿಯ ಕಠಿಣ ಪರಿಶ್ರಮದ ಫಲವಾಗಿ ಪಂದ್ಯಗಳಲ್ಲಿ ಫಲಿತಾಂಶ ಸಾಧ್ಯವಾಯಿತು. ಇದೇ ಕಾರಣಕ್ಕೆರ ಸಿರಾಜ್ ತಮ್ಮ ಪಾಲಿನ ಬಹುಮಾನ ಮೊತ್ತವನ್ನು ಸಿಬ್ಬಂದಿಗೆ ಅರ್ಪಿಸಿದ್ದಾರೆ.