ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರು ಕೀನ್ಯಾ ತಂಡದ ಮುಖ್ಯ ತರಬೇತುದಾರರಾಗಿ ನೇಕಮಗೊಂಡಿದ್ದಾರೆ. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್ ನಲ್ಲಿ ಸ್ಪರ್ಧಿಸಲಿದೆ.
50 ವರ್ಷದ ದೊಡ್ಡ ಗಣೇಶ್ 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 104 ಪಂದ್ಯಗಳಿಂದ 365 ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್ ಪಡೆದಿದಾರೆ. ಲಿಸ್ಟ್ ‘ಎ’ ಕ್ರಿಕೆಟ್ ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಸೇರಿ ಒಟ್ಟು 2,548 ರನ್ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.
ಕೀನ್ಯಾ 1996, 1999, 2003, 2007 ಮತ್ತು 2011 ರಲ್ಲಿ ವಿಶ್ವಕಪ್‌ನಲ್ಲಿ ಭಾಗವಹಿಸಿದೆ. ನಾನು ಕೀನ್ಯಾ ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ನೋಡಿದ್ದೇನೆ. 10 ವರ್ಷಗಳಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ನಾನು ಇತಿಹಾಸದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಕೀನ್ಯಾದವರು ಚಾಂಪಿಯನ್ ಆಗಿದ್ದಾರೆ ಎಂದು ಗಣೇಶ್ ಹೇಳಿದ್ದಾರೆ. ನಾನು ವೃತ್ತಿಪರ ಕೋಚ್ ಆಗಿದ್ದೇನೆ. ಇಲ್ಲಿಗೆ ಬರುವ ಮೊದಲು, ನಾನು ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳನ್ನು ವೀಕ್ಷಿಸಲು ಯೂಟ್ಯೂಬ್‌ಗೆ ಹೋಗಿದ್ದೆ. ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ನಾನು ಹೇಳಬಲ್ಲೆ ಎಂದು ಗಣೇಶ್ ತಿಳಿಸಿದ್ದಾರೆ. 4 ತಿಂಗಳ ಹಿಂದಷ್ಟೇ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ದೊಡ್ಡ ಗಣೇಶ್ ಮೊದಲು ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು.
Advertisement