
ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ವಿನೋದ್ ಕಾಂಬ್ಳಿ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ಸಂಸ್ಥೆ ಐಎಎನ್‌ಎಸ್‌ನ ಎಕ್ಸ್ ಪೋಸ್ಟ್ ಪ್ರಕಾರ, ಸಚಿನ್ ತೆಂಡೂಲ್ಕರ್ ಅವರ ದೀರ್ಘಕಾಲದ ಸಹ ಆಟಗಾರ ವಿನೋದ್ ಕಾಂಬ್ಳಿ ಅವರು ಶನಿವಾರ ತಡರಾತ್ರಿ ಥಾಣೆಯ ಆಕೃತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿರುವ ವಿನೋದ್ ಕಾಂಬ್ಳಿ ಅವರ ಸ್ಥಿತಿ ಈಗ ಸ್ಥಿರವಾಗಿದೆ. ಆದರೆ ಗಂಭೀರವಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.
ಸೋಮವಾರ ಅಭಿಮಾನಿಯೊಬ್ಬರು ವಿನೋದ್ ಕಾಂಬ್ಳಿ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಕಾಣಬಹುದಾಗಿದೆ.
ಕಾಂಬ್ಳಿ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ತಾನು ಗಂಭೀರ ಮೂತ್ರಕೋಶದ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದಲ್ಲದೆ ಕಾಂಬ್ಳಿ ಅನೇಕ ಕಾಯಿಲೆಗಳಿಂದ ಬಳಲುತ್ತಿರುವುದಾಗಿಯೂ ಹೇಳಿಕೊಂಡಿದ್ದರು.
Advertisement