
ವಡೋದರ: ಇಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದ ಭಾರತ, ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಶುಕ್ರವಾರ ಹೊಸ ದಾಖಲೆ ಬರೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಗೆ ಭಾರತದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು. ಪರಿಣಾಮ 38.5 ಓವರ್ ಗಳಲ್ಲಿ ಕೇವಲ 162 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಭಾರತದ ವೇಗಿ ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 6 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರು.ವೆಸ್ಟ್ ಇಂಡೀಸ್ ನೀಡಿದ 163 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮತಿ ಮಂಧಾನ ಕೇವಲ 4 ರನ್ ಗಳಿಗೆ ಕ್ಯಾಚ್ ನೀಡಿ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು.
ಬಳಿಕ ಪ್ರತಿಕಾ ರಾವಲ್ 18, ನಾಯಕಿ ಹರ್ಮನ್ ಪ್ರೀತ್ ಕೌರ್ 32, ರೋಡ್ರಿಗಸ್ 29, ದೀಪ್ತಿ ಶರ್ಮಾ ಅಜೇಯ 39, ರಿಚಾ ಘೋಶ್ 23 ರನ್ ಗಳಿಸುವ ಮೂಲಕ 28.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವಿಪ್ ಮಾಡಿತು. ದೀಪ್ತಿ ಶರ್ಮಾ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
Advertisement