ರಾಜ್ ಕೋಟ್: ಭಾರತ- ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ನ ಉಳಿದ ಅವಧಿಗೆ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅಲಭ್ಯರಾಗಿದ್ದಾರೆ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಎದುರಾಗಿರುವ ಹಿನ್ನೆಲೆಯಲ್ಲಿ ಟೆಸ್ಟ್ ಪಂದ್ಯದಿಂದ ಹಿಂದೆಸರಿಯುತ್ತಿರುವುದಾಗಿ ಅಶ್ವಿನ್ ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ. "ಕುಟುಂಬದಲ್ಲಿ ವೈದ್ಯಕೀಯ ತುರ್ತು ಎದುರಾಗಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್ ಅಶ್ವಿನ್ 3 ನೇ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಸಂಕಷ್ಟದ ಸನ್ನಿವೇಶದಲ್ಲಿ ಟೀಂ ಇಂಡಿಯಾ ಹಾಗೂ ಬಿಸಿಸಿಐ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
"ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ತನ್ನ ಬೆಂಬಲವನ್ನು ನೀಡುತ್ತದೆ. ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ”ಎಂದು ಹೇಳಿಕೆಯಲ್ಲಿ ಬಿಸಿಸಿಐ ತಿಳಿಸಿದೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ 500 ವಿಕೆಟ್ ಗಳಿಸಿದ ಯಶಸ್ಸಿನಲ್ಲಿರುವ ಅಶ್ವಿನ್ ಪಂದ್ಯದ ನಂತರದ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡ ಬೆನ್ನಲ್ಲೇ ಚೆನ್ನೈಗೆ ಮರಳಿದರು.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಇತಿಹಾಸ ಸೃಷ್ಟಿಸಿದ್ದಾರೆ. ಆಂಗ್ಲ ಬ್ಯಾಟ್ಸ್‌ಮನ್ ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಸ್ಟಾರ್ ಸ್ಪಿನ್ನರ್ 500 ವಿಕೆಟ್ ಪೂರೈಸಿದ್ದಲ್ಲದೆ ಟೀಂ ಇಂಡಿಯಾಗೆ ಬಿಗ್ ರಿಲೀಫ್ ನೀಡಿದ್ದಾರೆ.
ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಅವರ ಅಭಿಮಾನಿಗಳು ಈ ದಿನಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದರು. ಕಳೆದ 13 ವರ್ಷಗಳಿಂದ ತಮ್ಮ ಸ್ಪಿನ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಪರದಾಡುವಂತೆ ಮಾಡುತ್ತಿದ್ದ ಅಶ್ವಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಮೈಲುಗಲ್ಲು ಸಾಧಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡುವ ಅವಕಾಶ ಅಶ್ವಿನ್ ಕೈತಪ್ಪಿತ್ತು. ಆದರೆ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಅಶ್ವಿನ್ ಇಂಗ್ಲೆಂಡ್ ಆರಂಭಿಕ ಆಟಗಾರ ಜ್ಯಾಕ್ ಕ್ರಾಲಿಯನ್ನು ತಮ್ಮ ವೃತ್ತಿಜೀವನದ 500ನೇ ಬಲಿಪಶುವನ್ನಾಗಿ ಮಾಡಿದರು. ಈ ಮೂಲಕ ಈ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡರು.
Advertisement