
ಕೊಲಂಬೊ: ಮುಂಬರುವ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ-20 ಅಂತಾರಾಷ್ಟ್ರೀಯ ಸರಣಿಗೂ ಮುನ್ನ ಶ್ರೀಲಂಕಾ ಟಿ-20 ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ವನಿಂದು ಹಸರಂಗಾ ರಾಜೀನಾಮೆ ನೀಡಿದ್ದಾರೆ. ಜುಲೈ 26, 27 ಮತ್ತು 29 ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರು ಟಿ-20 ಪಂದ್ಯಗಳ ನಂತರ ನಡೆಯಲಿರುವ ಏಕದಿನ ಸರಣಿಗಾಗಿ ಭಾರತ ತಂಡ ಶ್ರೀಲಂಕಾಕ್ಕೆ ತೆರಳುತ್ತಿದೆ.
ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟಿ-20 ನಾಯಕ ಸ್ಥಾನದಿಂದ ಕೆಳಗಿಳಿಯಲು ವನಿಂದು ಹಸರಂಗ ನಿರ್ಧರಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ. ಶ್ರೀಲಂಕಾ ಕ್ರಿಕೆಟ್‌ನ ಹಿತದೃಷ್ಟಿಯಿಂದ ನಾಯಕತ್ವ ತೊರೆಯುತ್ತಿದ್ದು, ಆಟಗಾರನಾಗಿ ತಂಡದಲ್ಲಿ ಉಳಿಯಲು ನಿರ್ಧರಿಸಿರುವುದು ಹಸರಂಗಾ ತಿಳಿಸಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದ್ದ ಹಸರಂಗಾ, ಸೂಪರ್ 8 ಹಂತಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದರು.
ಆಟಗಾರರನಾಗಿ ಶ್ರೀಲಂಕಾ ತಂಡಕ್ಕೆ ಯಾವಾಗಲೂ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ನನ್ನ ತಂಡ ಮತ್ತು ನಾಯಕನ ಜೊತೆಗೆ ಸದಾ ನಿಲ್ಲುವುದಾಗಿ ಹಸರಂಗಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಸರಂಗಾ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.
Advertisement