
ನವದೆಹಲಿ: ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆಗಿನ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಗುರುವಾರ ಗುಡ್ ಬೈ ಹೇಳಿದ್ದಾರೆ.
ದಂಪತಿಗಳು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಹೇಳಿಕೆಯಲ್ಲಿ ವಿಚ್ಛೇದನದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಮಾಧ್ಯದಲ್ಲಿ ಹರಿದಾಡುತ್ತಿದ್ದ ವಿಚ್ಛೇದನ ವದಂತಿಗೆ ಇಂದು ಅಧಿಕೃತ ತೆರೆಬಿದ್ದಿದೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮೇ 31, 2020 ರಂದು ವಿವಾಹವಾದರು ಮತ್ತು ಅದೇ ವರ್ಷದ ಜುಲೈ 30 ರಂದು ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದರು.
ಫೆಬ್ರವರಿ 14, 2023 ರಂದು ಉದಯಪುರದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು.
"4 ವರ್ಷಗಳ ದಾಂಪತ್ಯ ಜೀವನ ಇಂದು ಅಂತ್ಯಗೊಂಡಿದೆ. ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಒಟ್ಟಿಗೆ ಇರಲು ಪ್ರಯತ್ನಿಸಿದ್ದೇವೆ. ಆದರೆ ಅಂತಿಮವಾಗಿ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ಇದು ನಮ್ಮಿಬ್ಬರ ಹಿತಾಸಕ್ತಿಯೂ ಆಗಿದೆ ಎಂದು ನಾವು ನಂಬುತ್ತೇವೆ. ಇಂತಹದ್ದೊಂದು ನಿರ್ಣಯ ಕೈಗೊಳ್ಳುವುದು ನಮಗೆ ಕಠಿಣವಾದ ನಿರ್ಧಾರವಾಗಿತ್ತು. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಮರೆಯಲು ಸಾಧ್ಯವಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಮ್ಮ Instagram ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
‘ನಾನು ಮತ್ತು ನತಾಸಾ ಬೇರ್ಪಟ್ಟರೂ ಒಟ್ಟಿಗೆ ಅಗಸ್ತ್ಯನನ್ನು ಬೆಳೆಸುತ್ತೇವೆ. ಆತ ನಮ್ಮಿಬ್ಬರ ಜೀವನದಲ್ಲಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪಾಂಡ್ಯ ಸ್ಪಷ್ಟಪಡಿಸಿದ್ದಾರೆ.
ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಮತ್ತು ಜನರಿಗೆ ಮನವಿ ಮಾಡಿದ್ದಾರೆ.
Advertisement