
ಬೆಂಗಳೂರು: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಸೀಸನ್ 3 ಹರಾಜು ಹಿನ್ನೆಲೆಯಲ್ಲಿ ಹಿರಿಯ ಆಟಗಾರರಾದ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಭಿನವ್ ಮನೋಹರ್ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿವೆ.
ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ಟೂರ್ನಿಯಾಗಿ ಜುಲೈ 25 ರಂದು ಆಟಗಾರರು ಹರಾಜು ಪ್ರಕ್ರಿಯೆ ನಿಗದಿಪಡಿಸಲಾಗಿದ್ದು, ಅದಕ್ಕೂ ಮುನ್ನಾ
ಪ್ರತಿ ಫ್ರಾಂಚೈಸ್ ಗಳು ಈ ಹಿಂದಿನ ಆವೃತ್ತಿಯ ತಂಡದಿಂದ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ತಮ್ಮ ಹಕ್ಕನ್ನು ಚಲಾಯಿಸಿದರು.
ಹುಬ್ಬಳ್ಳಿ ಟೈಗರ್ಸ್ ತಂಡವು ಮನೀಶ್ ಪಾಂಡೆ, ವಿಕೆಟ್ ಕೀಪರ್ ಶ್ರೀಜಿತ್ ಕೆಎಲ್ ಮತ್ತು ಯುವ ಆಲ್ ರೌಂಡರ್ ಮನ್ವಂತ್ ಕುಮಾರ್ ಅವರನ್ನು ಉಳಿಸಿಕೊಂಡಿದೆ. ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ ಕೂಡ ಹುಬ್ಬಳ್ಳಿ ಟೈಗರ್ಸ್ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಇನ್ನೂ ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಮೈಸೂರು ವಾರಿಯರ್ಸ್ ತಂಡ ಕ್ಯಾಪ್ಟನ್ ಕರುಣ್ ನಾಯರ್, ಸಿಎ ಕಾರ್ತಿಕ್, ಆಲ್ ರೌಂಡರ್ ಮನೋಜ್ ಭಾಂಡಗೆ ಅವರನ್ನು ಉಳಿಸಿಕೊಂಡಿದೆ.
ಗುಲ್ಬರ್ಗ ಮಿಸ್ಟಿಕ್ಸ್ ತಂಡವು ದೇವದತ್ ಪಡಿಕ್ಕಲ್, ಆರ್ ಸಿಬಿ ವೇಗಿ ವೈಶಾಂಕ್ ವಿಜಯ್ ಕುಮಾರ್ ಮತ್ತು ಸಮ್ರಾನ್ ರವಿ, ಅನೀಶ್ ಕೆವಿ ಅವರನ್ನು ಉಳಿಸಿಕೊಂಡಿದ್ದರೆ, ಶಿವಮೊಗ್ಗ ಲಯನ್ಸ್ ತಂಡವು ನಿಕಿನ್ ಜೋಶ್, ರೋಹನ್ ಪಾಟೀಲ್, ಸಿದ್ದಾರ್ಥ ಕೆವಿ ಮತ್ತು ಪರಾಸ್ ಗುರ್ಬಾಕ್ಸ್ ಆರ್ಯ ಅವರನ್ನು ಉಳಿಸಿಕೊಂಡಿದೆ. ಈ ಮಧ್ಯೆ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮಯಾಂಕ್ ಅಗರ್ವಾಲ್, ಸುರಾಜ್ ಅಹುಜಾ, ಆಲ್ ರೌಂಡರ್ ಶುಬಾಂಗ್ ಹೆಗ್ಡೆ ಮತ್ತು ಮತ್ತು ಮೊಹ್ಸಿನ್ ಖಾನ್ ಅವರನ್ನು ಉಳಿಸಿಕೊಂಡಿದೆ.
ಮುಂಬರುವ ಆವೃತ್ತಿಯ ಉತ್ಸಾಹವನ್ನು ವ್ಯಕ್ತಪಡಿಸಿದ ಕೆಎಸ್‌ಸಿಎ ಉಪಾಧ್ಯಕ್ಷ ಸಂಪತ್ ಕುಮಾರ್, "ಮಹಾರಾಜ ಟ್ರೋಫಿಯ ಮತ್ತೊಂದು ರೋಚಕ ಆವೃತ್ತಿಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ಆಟಗಾರರನ್ನು ಉಳಿಸಿಕೊಳ್ಳುವುದು ನಮ್ಮ ಫ್ರಾಂಚೈಸಿ ಮಾದರಿಯ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದರು. ಟೂರ್ನಿ ಸ್ಟಾರ್ ಸ್ಪೋರ್ಟ್ 2, ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
Advertisement