
ಕಿಂಗ್‌ಸ್ಟೌನ್: 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಡಿ ಗುಂಪಿನ ಪಂದ್ಯದಲ್ಲಿ ಗುರುವಾರ ನೆದರ್ಲೆಂಡ್ಸ್ ವಿರುದ್ಧ ಬಾಂಗ್ಲಾದೇಶ 25 ರನ್ ಗಳಿಂದ ಗೆಲುವು ಸಾಧಿಸಿದೆ.
ಇಂದು ಕಿಂಗ್‌ಸ್ಟೌನ್‌ನ ಸೇಂಟ್ ವಿನ್ಸೆಂಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ತಂಡ ಶಕಿಬ್ ಅಲ್ ಹಸನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಗೆಲುವಿಗೆ 160 ರನ್ ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್, ಮಧ್ಯಮ ಕ್ರಮಾಂಕದ ಉತ್ತಮ ಪ್ರದರ್ಶನದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ ಮಾತ್ರ ಗಳಿಸಿ 25 ರನ್‌ಗಳಿಂದ ಸೋಲು ಅನುಭವಿಸಿತು.
ಬಾಂಗ್ಲಾ ಪರ ಶಕಿಬ್ ಅಲ್ ಹಸನ್ ಅವರು 45 ಎಸೆತಗಳಲ್ಲಿ ಅಜೆಯ 64 ರನ್ ಗಳಿಸಿದರು. ತನ್ಜಿದ್ ಹಸನ್ 35, ಮಹಮುದುಲ್ಲಾ 25 ಹಾಗೂ ಜೇಕರ್ ಅಲಿ 14 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ರಿಷಾದ್ ಹೊಸೈನ್ 4 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ತಸ್ಕಿನ್ ಅಹ್ಮದ್ 4 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮುಸ್ತಾಫಿಜುರ್ ರಹಮಾನ್, ತಂಝೀಮ್ ಹಸನ್ ಶಕಿಬ್ ಮತ್ತು ಮಹಮದುಲ್ಲಾ ತಲಾ ಒಂದೊಂದು ವಿಕೆಟ್ ಪಡೆದರು.
Advertisement