
ಕೋಲ್ಕತ್ತ: ಶನಿವಾರ ನಡೆದ ಐಪಿಎಲ್ 2024 ಟೂರ್ನಿಯ 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ ಗಳ ಅಂತರದಿಂದ ಮಣಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಹಂತಕ್ಕೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ.
12 ಪಂದ್ಯಗಳಲ್ಲಿ ಒಂಬತ್ತನೇ ಗೆಲುವು ದಾಖಲಿಸಿರುವ ಕೆಕೆಆರ್, ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯವನ್ನು 16 ಓವರ್ ಗಳಿಗೆ ಸೀಮಿತಗೊಳಿಸಲಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 42, ನಿತೀಶ್ ರಾಣಾ 23, ಆ್ಯಂಡ್ರೆ ರಸೆಲ್ 24, ರಿಂಕು ಸಿಂಗ್ 20 ರನ್ ಗಳಿಸಿದರು.
ಬಳಿಕ ಕೆಕೆಆರ್ ನೀಡಿದ 158 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಎಂಟು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶಾನ್ ಗರಿಷ್ಠ 40 ರನ್ ಗಳಿಸಿದರು. ಇದರೊಂದಿಗೆ ಕೆಕೆಆರ್ ತಂಡ ಪ್ಲೇ ಆಫ್ ಗೆ ಲಗ್ಗೆ ಇಟ್ಟಿತು. ಮತ್ತೊಂದೆಡೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕನಸು ಭಗ್ನವಾಯಿತು.
Advertisement