Anshul Kamboj
ಅನ್ಶುಲ್ ಕಾಂಬೋಜ್

Ranji Trophy: ಎಲ್ಲಾ 10 ವಿಕೆಟ್ ಪಡೆದ ಮೂರನೇ ಬೌಲರ್ ಹರಿಯಾಣದ ಅನ್ಶುಲ್ ಕಾಂಬೋಜ್!

23 ವರ್ಷದ ಕಾಂಬೋಜ್, ರೋಹ್ಟಕ್‌ನ ಹೊರವಲಯದಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇರಳ ವಿರುದ್ಧದ ಆತಿಥೇಯ ತಂಡದ ಸಿ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
Published on

ಲಹ್ಲಿ: ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್ ಶುಕ್ರವಾರ ರಣಜಿ ಟ್ರೋಫಿಯ ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 30.1 ಓವರ್‌ ಬೌಲಿಂಗ್‌ ನಡೆಸಿದ ಅನ್ಶುಲ್ ಕಾಂಬೋಜ್ 9 ಮೇಡನ್‌ ಸಹಿತ ಕೇವಲ 49 ರನ್‌ ರೇಟ್ ನಲ್ಲಿ 10 ವಿಕೆಟ್‌ ಪಡೆದರು.

23 ವರ್ಷದ ಕಾಂಬೋಜ್, ರೋಹ್ಟಕ್‌ನ ಹೊರವಲಯದಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇರಳ ವಿರುದ್ಧದ ಆತಿಥೇಯ ತಂಡದ ಸಿ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಬಂಗಾಳದ ಪ್ರೇಮಾಂಗ್ಶು ಚಟರ್ಜಿ (10/20) ಮತ್ತು ರಾಜಸ್ಥಾನದ ಪ್ರದೀಪ್ ಸುಂದರಂ (10/78) ಉಳಿದಇಬ್ಬರು ಬೌಲರ್ ಗಳಾಗಿದ್ದಾರೆ. ಒಟ್ಟಾರೆಯಾಗಿ, ಕಾಂಬೋಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ವಿಕೆಟ್ ಪಡೆದ ಆರನೇ ಭಾರತೀಯರಾಗಿದ್ದಾರೆ. ಅನಿಲ್ ಕುಂಬ್ಳೆ, ಸುಭಾಷ್ ಗುಪ್ತೆ ಮತ್ತು ದೇಬಶಿಶ್ ಮೊಹಾಂತಿ ಈ ಪಟ್ಟಿಯಲ್ಲಿರುವ ಇತರರು. 23ರ ಹರೆಯದ ಅನ್ಶುಲ್ 2ನೇ ದಿನದಾಟದ ವೇಳೆಗೆ 8 ವಿಕೆಟ್‌ ಕಿತ್ತಿದ್ದರು. ಮೂರನೇ ದಿನವಾದ ಇಂದು(ಶುಕ್ರವಾರ) 2 ವಿಕೆಟ್‌ ಉರುಳಿಸುವುದರೊಂದಿಗೆ 10 ವಿಕೆಟ್‌ ಗೊಂಚಲು ತಮ್ಮದಾಗಿಸಿಕೊಂಡರು.

ಇವರ ಈ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಕೇರಳ ತಂಡ 291 ಕ್ಕೆ ಆಲೌಟ್ ಆಯಿತು. ಹರ್ಯಾಣ ಪರ ಒಂದೇ ಇನ್ನಿಂಗ್ಸ್‌ ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಯೂ ಕಾಂಬೋಜ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಜೋಗಿಂದರ್‌ ಶರ್ಮಾ ಹೆಸರಿನಲ್ಲಿತ್ತು. ಅವರು 2004-05ರ ಸೀಸನ್‌ನಲ್ಲಿ ವಿದರ್ಭ ವಿರುದ್ದ ಎಂಟು ವಿಕೆಟ್‌ ಕಿತ್ತಿದ್ದರು. ಆಕರ್ಷಕ ದೇಶೀಯ ಋತುವಿನ ನಂತರ 2024 ರ ಐಪಿಎಲ್‌ಗೆ ಮುಂಬೈ ಇಂಡಿಯನ್ಸ್‌ನಿಂದ ಆಯ್ಕೆಯಾದ ಕಾಂಬೋಜ್, ಇತ್ತೀಚೆಗೆ ಓಮನ್‌ನಲ್ಲಿ ನಡೆದ ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು.

ರಣಜಿ ಟ್ರೋಫಿ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಪಟ್ಟಿ

10/20 ಪ್ರೇಮಾಂಗ್ಶು ಚಟರ್ಜಿ ಬಂಗಾಳ ವಿರುದ್ಧ ಅಸ್ಸಾಂ (1956-57)

10/49 ಅಂಶುಲ್ ಕಾಂಬೋಜ್ ಹರಿಯಾಣ v ಕೇರಳ (2024-25)

10/78 ಪ್ರದೀಪ್ ಸುಂದರಂ ರಾಜಸ್ಥಾನ v ವಿದರ್ಭ (1985-86).

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿ:

10/20 ಪ್ರೇಮಾಂಗ್ಶು ಚಟರ್ಜಿ ಬಂಗಾಳ ವಿರುದ್ಧ ಅಸ್ಸಾಂ (1956-57) - ರಣಜಿ ಟ್ರೋಫಿ

10/46 ಡೆಬಾಸಿಸ್ ಮೊಹಾಂತಿ ಪೂರ್ವ ವಲಯ v ದಕ್ಷಿಣ ವಲಯ (2000-01) - ದುಲೀಪ್ ಟ್ರೋಫಿ

10/49 ಅಂಶುಲ್ ಕಾಂಬೋಜ್ ಹರಿಯಾಣ v ಕೇರಳ (2024-25)

10/74 10-74 - ಅನಿಲ್ ಕುಂಬ್ಳೆ ಭಾರತ v ಪಾಕಿಸ್ತಾನ (1999) -- ಕೋಟ್ಲಾ -- ಟೆಸ್ಟ್ ಪಂದ್ಯ

10/78 ಪ್ರದೀಪ್ ಸುಂದರಂ ರಾಜಸ್ಥಾನ ವಿರುದ್ಧ ವಿದರ್ಭ (1985-86) - ರಣಜಿ ಟ್ರೋಫಿ

10/78 ಸುಭಾಷ್ ಗುಪ್ತೆ ಬಾಂಬೆ v ಪಾಕಿಸ್ತಾನ ಕಂಬೈನ್ಡ್ ಸರ್ವಿಸಸ್ (1954-55).

X

Advertisement

X
Kannada Prabha
www.kannadaprabha.com