ಮುಂಬೈ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರಿಂದ ತೆರವಾಗುತ್ತಿರುವ ಸ್ಥಾನಗಳಿಗೆ ಶೀಘ್ರವೇ ಹೊಸ ನೇಮಕಾತಿ ನಡೆಯಬೇಕಿದೆ.
ಜಯ್ ಶಾ ಅವರ ನಿರ್ಗಮನದಿಂದ ತೆರವುಗೊಳ್ಳಲಿರುವ ಸ್ಥಾನಗಳಿಗೆ ಯಾರು ನೇಮಕವಾಗಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಈ ಪೈಕಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷನ ಹೆಸರು ಮುಂಚೂಣಿಯಲ್ಲಿದೆ.
ಬಿಸಿಸಿಐ ಕಾರ್ಯದರ್ಶಿ ಸ್ಥಾನ ತೆರವಾಗುವುದಕ್ಕೂ ಪಾಕ್ ಕ್ರಿಕೆಟ್ ಮಂಡಳಿಗೂ ಸಂಬಂಧವೇನು? ಎಂದು ಹುಬ್ಬೇರಿಸಬೇಡಿ...
ಜಯ್ ಶಾ ಐಸಿಸಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದರಿಂದ ಹಲವು ಕ್ರಿಕೆಟ್ ಮಂಡಳಿಯಲ್ಲಿ ಹಲವು ಸ್ಥಾನಗಳಲ್ಲಿ ಬದಲಾವಣೆಯಾಗುತ್ತಿದೆ. ಆ ಪೈಕಿ ಬಿಸಿಸಿಐ ನ ಕಾರ್ಯದರ್ಶಿ ಸ್ಥಾನವೂ ಒಂದು ಅಷ್ಟೇ. ಇದರ ಜೊತೆಗೆ ತೆರವಾಗುತ್ತಿರುವ ಸ್ಥಾನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹೆಸರು ಮುಂಚೂಣಿಯಲ್ಲಿದೆ.
ಪಿಟಿಐ ವರದಿಯ ಪ್ರಕಾರ, ಜಯ್ ಶಾ ಅವರಿಂದ ತೆರವಾಗುವ ಸ್ಥಾನಕ್ಕೆ ಮೊಹ್ಸಿನ್ ನಖ್ವಿ ನೇಮಕವಾಗುವುದರ ಬಗ್ಗೆ ವರ್ಷಾಂತ್ಯಕ್ಕೆ ಅಧಿಕೃತ ಘೋಷಣೆಯಾಗಲಿದೆ. ಹೊಸ ಹುದ್ದೆಯಲ್ಲಿ ಮೊಹ್ಸಿನ್ ನಖ್ವಿ ಅಧಿಕಾರಾವಧಿ 2 ವರ್ಷಗಳದ್ದಾಗಿರಲಿದ್ದು, ಜಯ್ ಶಾ ನಿರ್ಗಮನದ ಬೆನ್ನಲ್ಲೇ ನಖ್ವಿ ಅಧಿಕಾರ ವಹಿಸಿಕೊಳ್ಳಲಿದ್ದಾರಂತೆ.
ಜಯ್ ಶಾ ಕೇವಲ ಬಿಸಿಸಿಐ ಕಾರ್ಯದರ್ಶಿ ಮಾತ್ರವಲ್ಲದೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಯ ಅಧ್ಯಕ್ಷರೂ ಆಗಿದ್ದಾರೆ. ACC ಆಡಳಿತ ಮಂಡಳಿಯ ಸಭೆಯಲ್ಲಿ ನಖ್ವಿ ನೇಮಕದ ಬಗ್ಗೆ ಚರ್ಚೆ ನಡೆಯಲಿದೆ.
Advertisement