
ದುಬೈ: ICC ಪುರುಷರ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗಾಗಿ ರಚಿಸಲಾಗಿರುವ ಕಿರು ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ನ ರಚಿನ್ ರವೀಂದ್ರ ಹಾಗೂ ಜಾಕೋಬ್ ಡಫಿ ಸ್ಥಾನ ಪಡೆದಿದ್ದಾರೆ.
ಕಳೆದ ತಿಂಗಳು ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಗೆಲುವಿನಲ್ಲಿ ಭಾರತದ ಪರ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದ್ದರು. ಬಲಗೈ ಬ್ಯಾಟರ್ ಮಾರ್ಚ್‌ನಲ್ಲಿ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 172 ರನ್ ಗಳಿಸಿದರು. 77.47 ರ ಸ್ಟ್ರೈಕ್ ರೇಟ್‌ನೊಂದಿಗೆ 57.33 ರ ಸರಾಸರಿಯಲ್ಲಿ ಟೂರ್ನಿಯಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.
ಎ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 79, ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 45 ರನ್ ಗಳಿಸಿದ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 48 ರನ್ ಗಳಿಸುವುದರೊಂದಿಗೆ ಭಾರತ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ತಮ್ಮ ಆಲ್‌ರೌಂಡ್ ಸಾಮರ್ಥ್ಯದಿಂದ ಟೂರ್ನಿಯಲ್ಲಿ ಗಮನ ಸೆಳೆದಿದ್ದರು.
ಮಾರ್ಚ್‌ನಲ್ಲಿ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 50.33 ರ ಸರಾಸರಿಯಲ್ಲಿ 106.33 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ ರಚಿನ್ ರವೀಂದ್ರ 151 ರನ್ ಗಳಿಸಿದ್ದರು. ಅಲ್ಲದೇ ಪ್ರಮುಖ ಮೂರು ವಿಕೆಟ್ ಪಡೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿ-ಫೈನಲ್‌ನಲ್ಲಿ 108 ರನ್ ಗಳಿಸಿದರು.
ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫ್ಫಿ ಪಾಕಿಸ್ತಾನದ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ T20I ಸರಣಿಯಲ್ಲಿ 4-1 ಪಂದ್ಯ ಗೆಲುವಿನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. 8.38 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು. ಅತ್ಯುತ್ತಮ ಫಾರ್ಮ್ ನಿಂದ ICC ಪುರುಷರ T20I ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದರು.
Advertisement