
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ 2025 ರ 42ನೇ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ.
ತವರಿನಾಚೆ ಗೆಲುವಿನ ಅಭಿಯಾನ ಮುಂದುವರೆಸಿರುವ ರಜತ್ ಪಾಟಿದಾರ್ ಪಡೆಗೆ ಈ ಬಾರಿ ತವರಿನಲ್ಲಿ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆಡಿದ ಮೂರು ಪಂದ್ಯಗಳನ್ನು ಸೋತಿತ್ತು, ಇಂದಿನ ಪಂದ್ಯದಲ್ಲಿ ಗೆಲುವಿನ ತವಕದಲ್ಲಿದೆ. ಕಳೆದ ಪಂದ್ಯದಲ್ಲಿ ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸುವ ಮೂಲಕ ಐದನೇ ಗೆಲುವು ಸಾಧಿಸಿತ್ತು.
ಮತ್ತೊಂದೆಡೆ, ರಿಯಾನ್ ಪರಾಗ್ ನೇತೃತ್ವದ RR ಟೂರ್ನಿಯಲ್ಲಿ ಒಟ್ಟು ಆರು ಪಂದ್ಯಗಳನ್ನು ಸೋತಿದೆ. ನಾಯಕ ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ಪರಾಗ್ ನೇತೃತ್ವದ ತಂಡ ಪ್ಲೇಆಫ್ ರೇಸ್‌ನಲ್ಲಿ ಇರಲು ಸೋಲಿನಿಂದ ಹೊರಬರುವ ವಿಶ್ವಾಸದಲ್ಲಿದೆ. ಉಭಯ ತಂಡಗಳು ಐಪಿಎಲ್‌ನಲ್ಲಿ 34 ನೇ ಬಾರಿಗೆ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 10 ನೇ ಬಾರಿಗೆ ಸೆಣಸಾಡುತ್ತಿವೆ
RCB vs RR ನಡುವಿನ ಹೆಡ್ ಟು ಹೆಡ್ ದಾಖಲೆಗಳು: 2008 ರಿಂದ ಐಪಿಎಲ್‌ನಲ್ಲಿ 33 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಪಂದ್ಯಗಳಲ್ಲಿ ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ 14 ಬಾರಿ ಆರ್ ಸಿಬಿ ವಿರುದ್ಧ ಗೆದ್ದಿದ್ದಾರೆ, ಆದರೆ 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಇನ್ನೂ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಒಟ್ಟು 9 ಬಾರಿ ಸ್ಪರ್ಧಿಸಿದ್ದು, 4 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದಿದ್ದರೆ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳು ಯಾವುದೇ ಫಲಿತಾಂಶ ಇಲ್ಲದೆ ಕೊನೆಗೊಂಡಿದೆ.
Advertisement