

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಬುಧವಾರ ಹುಬ್ಬಳ್ಳಿಯ ರಾಜ್‌ನಗರದ ಕೆಎಸ್‌ಸಿಎ ಮೈದಾನಕ್ಕೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಹಿಂದಿನ ಕೆಎಸ್ ಸಿಎ ಸಮಿತಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅವರು ಮಾಡಿರುವ ತಪ್ಪುಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿನ ಕ್ರಿಕೆಟ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹಲವು ಹೊಸ ಕ್ರಮಗಳ ಪ್ಲಾನ್ ಮಾಡುತ್ತಿರುವುದಾಗಿ ತಿಳಿಸಿದರು.
ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಸ್ಥಗಿತಗೊಂಡಿರುವ ಕ್ಲಬ್‌ಹೌಸ್ ನಿರ್ಮಾಣ ಯೋಜನೆಗಳ ಕುರಿತು ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ವರದಿ ಸ್ವೀಕರಿಸಿದ ನಂತರ ನಾವು ಅದನ್ನು ತಾಂತ್ರಿಕ ತಂಡದೊಂದಿಗೆ ಚರ್ಚಿಸುತ್ತೇವೆ. ಕ್ಲಬ್‌ಹೌಸ್ ನಿರ್ಮಾಣ ಕಾರ್ಯಗಳನ್ನು ಸಾಧ್ಯವಾದಷ್ಟು ಬೇಗ ಪುನರಾರಂಭಿಸುತ್ತೇವೆ ಎಂದು ಅವರು ಹೇಳಿದರು.
ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಕೈಗೊಳ್ಳಲಾಗುವುದು. ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡಲು ಕ್ರಮಕೈಗೊಳ್ಳಲಾಗುವುದು ಮತ್ತು ಕ್ರಿಕೆಟ್ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಕ್ರಿಕೆಟ್‌ನಲ್ಲಿ ಹೊಸ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು. ಹುಬ್ಬಳ್ಳಿ ಮೈದಾನದಲ್ಲಿ ಹೆಚ್ಚು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿ ಮಾದರಿ ಕೆಲಸ ಮಾಡಲಾಗುವುದು. ಮಹಿಳಾ ಪಂದ್ಯಗಳಿಗೂ ಅವಕಾಶ ಕಲ್ಪಿಸಲಾಗುವುದು. "ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ನಂತರ, ಮಹಿಳಾ ಕ್ರಿಕೆಟಿಗರು ಎಲ್ಲೆಡೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಹೆಚ್ಚಿನ ಪಂದ್ಯಗಳನ್ನು ಆಯೋಜಿಸುವ ಮೂಲಕ ಮಹಿಳಾ ಆಟಗಾರರನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಬೆಳೆಸುತ್ತೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್ ಮಾತನಾಡಿ, ಮೊದಲ ಹಂತದಲ್ಲಿ ಝೋನಲ್ ಅಕಾಡೆಮಿಗಳನ್ನು ನಿರ್ಮಿಸಿ, ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ಹಾಗೂ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಹಿಂದಿನಂತೆ ಎಲ್ಲ ಆಟಗಾರರಿಗೂ ಪ್ರಯಾಣ ಭತ್ಯೆ ನೀಡಲು ತೀರ್ಮಾನ ಕೈಗೊಳ್ಳಲಾಗುವುದು. ಕೆಎಸ್ ಸಿಎ ಕಾರ್ಯದರ್ಶಿ ವಿನಯ್ ಮೃತ್ಯುಂಜಯ, ಸದಸ್ಯರಾದ ವೀರಣ್ಣ ಸವಡಿ, ವಿರೇಶ ಉಂಡಿ, ಅಮನ್ ಕಿತ್ತೂರು, ಮುಖಂಡ ಅಲ್ತಾಫ್ ಕಿತ್ತೂರ ಉಪಸ್ಥಿತರಿದ್ದರು.
Advertisement