

ಪಾಕಿಸ್ತಾನ ವಿರುದ್ಧದ U-19 ಏಷ್ಯಾಕಪ್ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ತೀವ್ರ ನಿರಾಸೆ ಅನುಭವಿಸಿದ್ದು, ಗುಟ್ಟಾಗಿ ಉಳಿದಿಲ್ಲ. ಸೋಲು ನೋವುಂಟು ಮಾಡಿರುವಂತೆಯೇ ತೀವ್ರ ಟೀಕೆಗಳು ಕೇಳಿಬರುತ್ತಿವೆ.
15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಬ್ಯಾಟಿಂಗ್ ವೈಫಲ್ಯ ಮಾತ್ರವಲ್ಲದೇ, ಪಾಕಿಸ್ತಾನಿ ವೇಗಿ ಅಲಿ ರಜಾ ಎಸೆತದಲ್ಲಿ ವಿಕೇಟ್ ಕೀಪರ್ ಗೆ ಕ್ಯಾಚ್ ಒಪ್ಪಿಸಿ ಔಟಾದ ನಂತರ ಪಾಕ್ ಆಟಗಾರನ ಜೊತೆಗಿನ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಸೂರ್ಯವಂಶಿ ಶೂ ತೋರಿಸುವಂತೆ ಮಾಡಿರುವ ಸನ್ಹೆಯ ವಿಡಿಯೋ ಸಹ ಸಾಕಷ್ಟು ವೈರಲ್ ಆಗಿದ್ದು, ಸ್ಪೋರ್ಟ್‌ಮ್ಯಾನ್ ಶಿಪ್ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.
ಈ ಮಧ್ಯೆ, ಪಂದ್ಯದಲ್ಲಿ ಸೋತ ಬಳಿಕ ಕ್ರೀಡಾಂಗಣದಿಂದ ಹೊರಬರುತ್ತಿದ್ದ ವೈಭವ್ ಸೂರ್ಯವಂಶಿಗೆ ಪಾಕಿಸ್ತಾನದ ಅಭಿಮಾನಿಗಳು ಬೂಯಿಂಗ್ (booing)ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಪಂದ್ಯದ ಮೇಲಿರಬೇಕಾದ ಗಮನ ಈಗ ಈ ಎರಡು ವೈರಲ್ ವಿಡಿಯೋಗಳ ಮೇಲೆ ನೆಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅತಿ ಒತ್ತಡದ ಸಂದರ್ಭದಲ್ಲಿ ಕೆಟ್ಟ ಹೊಡೆತಕ್ಕೆ ಪ್ರಯತ್ನಿಸಿ ಔಟಾದ ವೈಭವ್ ಸೂರ್ಯವಂಶಿ ಹಾಗೂ ಆ ಸಂದರ್ಭದಲ್ಲಿ ಅವರು ನಡೆದುಕೊಂಡು ರೀತಿಯನ್ನು ಕೆಲವರು ಟೀಕಿಸುತ್ತಿದ್ದರೆ, ಮತ್ತೆ ಕೆಲವರು ವೈಭವ್ ಸೂರ್ಯವಂಶಿಗೆ ಇನ್ನೂ 15 ವಯಸ್ಸು. ಹೇಗೆ ಭಾವನೆ ವ್ಯಕ್ತಪಡಿಸಬೇಕು ಎಂಬುದು ಸರಿಯಾಗಿ ಗೊತ್ತಾಗಿಲ್ಲ. ಆ ವಯಸ್ಸಿನಲ್ಲಿ ನಾವು ಎಷ್ಟೋ ಸಂದರ್ಭಗಳಲ್ಲಿ ತಪ್ಪು ಮಾಡಿದ್ದೇವೆ. ಹಾಗಾಗೀ ಕೇವಲ ಒಂದು ಬಾರಿ ಮಾಡಿದ ತಪ್ಪಿಗೆ ಇಷ್ಟೊಂದು ಟೀಕಿಸುವುದು ಸರಿಯಲ್ಲ . ಮುಂದೊಂದು ದಿನ ಭಾರತೀಯ ಕ್ರಿಕೆಟ್ ನಲ್ಲಿ ದೊಡ್ಡ ಸ್ಟಾರ್ ಆಗಬಹುದು ಎನ್ನುತ್ತಿದ್ದಾರೆ.
Advertisement