
ತಿರುವನಂತಪುರಂ: ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಎಸ್ ಶ್ರೀಶಾಂತ್ ನೀಡಿರುವ ಹೇಳಿಕೆ ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಭಾರತದ ಮಾಜಿ ವೇಗಿ ಕೇರಳ ಕ್ರಿಕೆಟ್ ಆಡಳಿತ ಮಂಡಳಿ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ (KCA)ಆರೋಪಿಸಿದೆ.
ಇತ್ತೀಚಿಗೆ ಮಲಯಾಳಂ ಟಿವಿ ಚಾನೆಲ್ ವೊಂದರ ಚರ್ಚೆಯ ಸಂದರ್ಭದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಸ್ಯಾಮ್ಯನ್ಸ್ ಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗಾಗಿ ಶ್ರೀಶಾಂತ್ ಗೆ KCA ಇತ್ತೀಚಿಗೆ ಶೋಕಾಸ್ ನೋಟಿಸ್ ನೀಡಿದೆ. ಸ್ಯಾಮ್ಸನ್ ಬೆಂಬಲಿಸಿ ಹೇಳಿಕೆ ನೀಡಿರುವುದಕ್ಕೆ ಶ್ರೀಶಾಂತ್ ಗೆ ನೋಟಿಸ್ ನೀಡಿಲ್ಲ. ಆದರೆ, ಅಸೋಸಿಯೇಷನ್ ವಿರುದ್ಧ ತಪ್ಪುದಾರಿಗೆಳೆಯುವ ಮತ್ತು ಮಾನಹಾನಿಕಾರ ಹೇಳಿಕೆಗಾಗಿ ನೋಟಿಸ್ ನೀಡಲಾಗಿದೆ ಎಂದು KCA ಶುಕ್ರವಾರ ಸ್ಪಷ್ಟಪಡಿಸಿದೆ.
ಸಂಜು, ಸಚಿನ್ ಅಥವಾ ಯಾರೇ ಆಗಿರಲಿ, ನನ್ನ ಸಹೋದ್ಯೋಗಿಗಳ ಪರವಾಗಿ ನಾನು ನಿರಂತರವಾಗಿ ನಿಲುತ್ತೇನೆ. ಕೇರಳದ ಅಂತಾರಾಷ್ಟ್ರೀಯ ಆಟಗಾರನಾಗಿ ಸಂಜು ಅವರನ್ನು ಬೆಂಬಲಿಸುವುದು ಮುಖ್ಯ ಎಂದು ಶ್ರೀಶಾಂತ್ ಹೇಳಿದ್ದರು.
ವಿಜಯ್ ಹಜಾರೆ ಟ್ರೋಫಿಗಾಗಿ ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕಾಗಿ KCA ವಿರುದ್ಧ ವ್ಯಾಪಕ ಟೀಕೆಗಳ ನಡುವೆ ಶ್ರೀಶಾಂತ್ ಹೇಳಿಕೆ ನೀಡಿದ್ದರು. ಇದು ಮುಂದಿನ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಸಂಜು ಸ್ಯಾಮ್ಸ,ನ್ ಆಯ್ಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಇನ್ನೂ ಖುಲಾಸೆಗೊಂಡಿಲ್ಲ .ಕೇರಳ ಕ್ರಿಕೆಟ್ ಲೀಗ್ ಫ್ರಾಂಚೈಸಿ ಸಹ ಮಾಲೀಕರಾಗಿರುವ ಶ್ರೀಶಾಂತ್, ಅಸೋಸಿಯೇಷನ್ ವಿರುದ್ಧ ಮಾನಹಾನಿಕಾರ ಹೇಳಿಕೆ ನೀಡಿರುವುದು ಒಪ್ಪಂದದ ಉಲ್ಲಂಘನೆಯಾಗಿದೆ. ತನ್ನ ಆಟಗಾರರ ಪರ ಯಾವಾಗಲೂ ನಿಂತಿರುವುದಾಗಿ ಎಂದು KCA ಹೇಳಿದೆ.
ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಜೈಲಿನಲ್ಲಿದ್ದಾಗ ಪದಾಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಅವರ ಪರ ನಿಂತಿದ್ದರು. ಫಿಕ್ಸಿಂಗ್ ಕೇಸ್ ನಲ್ಲಿ ಆರೋಪ ಸತ್ಯವೆಂದು ಕಂಡುಬಂದ ನಂತರ ಬಿಸಿಸಿಐ ಜೀವನ ಪೂರ್ಣ ಕ್ರಿಕೆಟ್ ಆಡುವಂತಿಲ್ಲ ಎಂದು ನಿಷೇಧ ಹೇರಿತ್ತು. ತದನಂತರ BCCI ಒಂಬಡ್ಸುಮನ್ ಈ ಶಿಕ್ಷೆಯನ್ನು ಏಳು ವರ್ಷಗಳಿಗೆ ಕಡಿಮೆ ಮಾಡಿತು. ಕೋರ್ಟ್ ಕ್ರಿಮಿನಲ್ ಪ್ರಕ್ರಿಯೆಯನ್ನು ವಜಾಗೊಳಿಸಿದ್ದರೂ ಸ್ಪಾಟ್ ಫಿಕ್ಸಿಂಗ್ ಆರೋಪಗಳಿಂದ ಅವರು ಮುಕ್ತರಾಗಿಲ್ಲ. ಶ್ರೀಶಾಂತ್ ಅಂತವರು ಕೇರಳ ಆಟಗಾರರನ್ನು ರಕ್ಷಿಸುವ ಅಗತ್ಯವಿಲ್ಲ ಎಂದು KCA ಹೇಳಿದೆ.
Advertisement