
ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮತ್ತು SA20 ಲೀಗ್ ಕಮಿಷನರ್ ಗ್ರೇಮ್ ಸ್ಮಿತ್ ಅವರು ದಿನೇಶ್ ಕಾರ್ತಿಕ್ ಅವರನ್ನು "ದೊಡ್ಡ ಆಸ್ತಿ" ಎಂದು ಕರೆದಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ SA20 ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಾರ್ತಿಕ್, ಇತ್ತೀಚೆಗೆ ಮುಕ್ತಾಯಗೊಂಡ ಮೂರನೇ ಆವೃತ್ತಿಯಲ್ಲಿ ಪಾರ್ಲ್ ರಾಯಲ್ಸ್ ಪರ ಆಡಿದರು.
ಮಂಗಳವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಗ್ರೇಮ್ ಸ್ಮಿತ್, "ದಿನೇಶ್ ಕಾರ್ತಿಕ್ ಅದ್ಭುತ ವೃತ್ತಿಪರ ಆಟಗಾರರಾಗಿದ್ದು, ಈ ಬಾರಿ SA20ಗೆ ದೊಡ್ಡ ಆಸ್ತಿಯಾಗಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದರು, ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಹೊಡೆತಗಳೊಂದಿಗೆ ವಿಕೆಟ್‌ಗಳನ್ನು ಪರಿಣಾಮಕಾರಿಯಾಗಿ ಕಾಪಾಡಿದರು. ಕಾಮೆಂಟರಿ ಮತ್ತು ಜನ ಸಂಪರ್ಕ (PR)ಕಾರ್ಯಕ್ರಮಗಳಲ್ಲಿ ಅವರು ಇರುವುದು ಅದ್ಬುತವಾಗಿದೆ. ಚೆನ್ನಾಗಿ ಮಾತನಾಡುತ್ತಾರೆ. ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಭಾವೋದ್ರಿಕ್ತ ಪ್ರೇಕ್ಷಕರು ಮತ್ತು ಸ್ಪರ್ಧಾತ್ಮಕ ಕ್ರಿಕೆಟ್ ಬಗ್ಗೆ ಅವರು ಬಹಳವಾಗಿ ಮಾತನಾಡಿದರು ಎಂದು ತಿಳಿಸಿದರು.
39 ವರ್ಷದ ಕಾರ್ತಿಕ್ ಅವರು ಪಾರ್ಲ್ ರಾಯಲ್ಸ್ ಪರ 11 ಪಂದ್ಯಗಳಲ್ಲಿ 130 ರನ್ ಗಳಿಸಿದರು. ಡೇವಿಡ್ ಮಿಲ್ಲರ್ ನೇತೃತ್ವದ ರಾಯಲ್ಸ್ ತಂಡದಲ್ಲಿ ಜೋ ರೂಟ್, ಲುಂಗಿ ಎನ್‌ಗಿಡಿ ಮತ್ತು ಮುಜೀಬ್ ಉರ್ ರೆಹಮಾನ್‌ರಂತಹ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಇದ್ದರು.
ಭಾರತೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ವಿದೇಶದ ಫ್ರಾಂಚೈಸ್ ಲೀಗ್‌ಗಳಲ್ಲಿ ಆಡಲು ದಿನೇಶ್ ಕಾರ್ತಿಕ್ ಗೆ ಅವಕಾಶ ಸಿಕ್ಕಿತ್ತು. ಈ ಮಧ್ಯೆ MI ಕೇಪ್ ಟೌನ್ ತಮ್ಮ ಚೊಚ್ಚಲ SA20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
Advertisement