
ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಪಾಕ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ನ್ಯೂಜಿಲೆಂಡ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಕಿವೀಸ್ ಗೆಲುವಿಗೆ 242 ರನ್‌ಗಳ ಗುರಿಯನ್ನು ನೀಡಿತ್ತು. ಡ್ಯಾರಿಲ್ ಮಿಚೆಲ್ (57) ಮತ್ತು ಟಾಮ್ ಲ್ಯಾಥಮ್ (56) ಅವರ ಅರ್ಧಶತಕಗಳ ನೆರವಿನಿಂದ ಪ್ರವಾಸಿ ತಂಡವು ಇನ್ನೂ 28 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿಯನ್ನು ತಲುಪಿತು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಈ ಟ್ರೋಫಿ ಪಾಕಿಸ್ತಾನದ ಕೈಯಿಂದ ಜಾರಿದೆ.
ಈ ತ್ರಿಕೋನ ಸರಣಿಯಲ್ಲಿ ಮೂರನೇ ತಂಡ ದಕ್ಷಿಣ ಆಫ್ರಿಕಾ ಆಗಿದ್ದು, ಎರಡೂ ಪಂದ್ಯಗಳಲ್ಲಿ ಸೋತ ಕಾರಣ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ವಿಲಿಯಂ ಒ'ರೂರ್ಕ್ ಅವರಿಗೆ ಸಂದಿದೆ. ಸರಣಿಶ್ರೇಷ್ಠ ಪ್ರಶಸ್ತಿ ಸಲ್ಮಾನ್ ಅಘಾಗೆ ಸಿಕ್ಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ, ಫಖರ್ ಜಮಾನ್ ಮತ್ತು ಬಾಬರ್ ಅಜಮ್ ಅವರ ಹೊಸ ಆರಂಭಿಕ ಜೋಡಿಯಿಂದ ಮತ್ತೊಮ್ಮೆ ನಿರಾಶೆಗೊಂಡಿತು. ಫಖರ್ 10 ರನ್ ಗಳಿಸಿ ಔಟಾದರೇ ಬಾಬರ್ 29 ರನ್ ಗಳಿಸಿ ಔಟಾದರು. ಇದಾದ ನಂತರ, ಬ್ಯಾಟಿಂಗ್ ಮಾಡಲು ಬಂದ ಸೌದ್ ಶಕೀಲ್ ಕೂಡ 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ನಾಯಕ ಮೊಹಮ್ಮದ್ ರಿಜ್ವಾನ್ (46) ಮತ್ತು ಸಲ್ಮಾನ್ ಆಘಾ (45) ಪರಿಸ್ಥಿತಿಯನ್ನು ಪಾರುಮಾಡಲು ಪ್ರಯತ್ನಿಸಿದರು ಆದರೆ ತಂಡವನ್ನು 250 ದಾಟಿಸಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನ ತಂಡವು 50 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ ಮತ್ತು ಇಡೀ ತಂಡವು 242 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಸ್ಕೋರ್ ಅನ್ನು ಬೆನ್ನಟ್ಟಲು ಬಂದ ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವಿಲ್ ಯಂಗ್ ಎರಡನೇ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಇದರ ನಂತರ, ಕೇನ್ ವಿಲಿಯಮ್ಸನ್ ಮತ್ತು ಡೆವೊನ್ ಕಾನ್ವೇ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಕಾನ್ವೇ 48 ಮತ್ತು ವಿಲಿಯಮ್ಸನ್ 34 ರನ್ ಗಳಿಸಿದರು.
ಈ ಜೋಡಿಯ ನಿರ್ಗಮನದ ನಂತರ, ಪಾಕಿಸ್ತಾನಕ್ಕೆ ಮತ್ತೆ ಗೆಲುವಿನ ಲಯಕ್ಕೆ ಮರಳುವ ಅವಕಾಶವಿತ್ತು. ಆದರೆ ಡ್ಯಾರಿಲ್ ಮಿಚೆಲ್ ಮತ್ತು ಟಾಮ್ ಲ್ಯಾಥಮ್ ಕ್ರೀಸ್‌ನಲ್ಲಿ ಜವಾಬ್ದಾರಿ ವಹಿಸಿಕೊಂಡರು. ಇಬ್ಬರೂ ಅರ್ಧಶತಕಗಳನ್ನು ಗಳಿಸಿ ಪಾಕಿಸ್ತಾನವನ್ನು ಪಂದ್ಯದಿಂದ ಹೊರದಬ್ಬಿದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತ್ರಿಕೋನ ಸರಣಿ ಸೋಲು ಚಾಂಪಿಯನ್ಸ್ ಟ್ರೋಫಿ ಗೂ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದೆ.
Advertisement