
ಎಡ್ಜ್‌ಬಾಸ್ಟನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಲ್ ರೌಂಡರ್ ರವೀಂದ್ರ ಜಡೇಜಾ ಬಿಸಿಸಿಐನ ಹೊಸದಾದ ಪ್ರಮುಖ ನಿಯಮವೊಂದನ್ನು ಉಲ್ಲಂಘಿಸಿದ್ದಾರೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ 89 ರನ್ ಗಳಿಸಿದ ಜಡೇಜಾ, ಎಡ್ಜ್‌ಬಾಸ್ಟನ್ ಕ್ರೀಡಾಂಗಣಕ್ಕೆ ಪ್ರತ್ಯೇಕವಾಗಿ ತೆರಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ನಂತರ ಹೊರಡಿಸಲಾದ ಹೊಸ BCCI ಮಾರ್ಗಸೂಚಿ ಪ್ರಕಾರ, ಎಲ್ಲಾ ತಂಡದ ಸದಸ್ಯರು ತಂಡದ ಬಸ್‌ನಲ್ಲಿ ಕ್ರೀಡಾಂಗಣ ಮತ್ತು ಅಭ್ಯಾಸದ ಅವಧಿಗೆ ಒಟ್ಟಿಗೆ ಪ್ರಯಾಣಿಸಬೇಕಾಗುತ್ತದೆ. ಹೊಸ ನಿಯಮವು ತಂಡದೊಳಗೆ ಶಿಸ್ತನ್ನು ಕಾಪಾಡಿಕೊಳ್ಳುವ ಗುರಿಯೊಂದಿಗೆ ಪ್ರತ್ಯೇಕವಾಗಿ ತೆರಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಜಡೇಜಾ ಏಕಾಂಗಿಯಾಗಿ ಎಡ್ಜ್‌ಬಾಸ್ಟನ್ ಕ್ರೀಡಾಂಗಣಕ್ಕೆ ಪ್ರಯಾಣಿಸಿದ್ದು, ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ESPNcricinfo ಗುರುವಾರ ವರದಿ ಮಾಡಿದೆ.
ಆದಾಗ್ಯೂ, ಜಡೇಜಾ ಅವರು ಯಾವುದೇ ನಿರ್ಬಂಧವನ್ನು ಎದುರಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಏಕೆಂದರೆ ಪಂದ್ಯಕ್ಕೂ ಮುನ್ನಾ ಕೆಲವು ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ಮಾಡಲು ಅವರು ತಂಡದ ಇತರರಿಗಿಂತ ಮುಂಚಿತವಾಗಿ ಸ್ಟೇಡಿಯಂ ತೆರಳಿರುವುದಾಗಿ ತಿಳಿದುಬಂದಿದೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ ಮತ್ತು ಶುಭಮನ್ ಗಿಲ್ ಜೋಡಿ ಭಾರತ ತಂಡ 587 ರನ್‌ಗಳ ಬೃಹತ್ ಮೊತ್ತ ಗಳಿಸಲು ನೆರವಾಯಿತು. ಜಡೇಜಾ 137 ಎಸೆತಗಳಲ್ಲಿ 89 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದರು.
Advertisement