
ಭಾರತೀಯ ಮಾಧ್ಯಮದ ಅನುಭವಿ ಸಂಜೋಗ್ ಗುಪ್ತಾ ಅವರನ್ನು ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ಅವರ ಜಾಗಕ್ಕೆ ಗುಪ್ತಾ ನೇಮಕವಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಜೆಫ್ ಅಲಾರ್ಡೈಸ್ ಈ ವರ್ಷದ ಆರಂಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಅವರು 4 ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು.
ಸಂಜೋಗ್ ಗುಪ್ತಾ ಪ್ರಸ್ತುತ ಜಿಯೋಸ್ಟಾರ್‌ನಲ್ಲಿ ಸಿಇಒ (ಕ್ರೀಡೆ ಮತ್ತು ನೇರ ಅನುಭವ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ವಿವಿಧ ಕಾರ್ಯಗಳ ಅನುಭವವಿದೆ. ಸಂಜೋಯ್ ಗುಪ್ತಾ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಸಂಜೋಗ್ ಗುಪ್ತಾ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2010ರಲ್ಲಿ ಸ್ಟಾರ್ ಇಂಡಿಯಾ (ಈಗ ಜಿಯೋಸ್ಟಾರ್) ಸೇರಿದರು. 2020ರಲ್ಲಿ ಡಿಸ್ನಿ ಮತ್ತು ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ಮುಖ್ಯಸ್ಥರಾಗಿ ನೇಮಕಗೊಂಡರು.
ನವೆಂಬರ್ 2024ರಲ್ಲಿ ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ವಿಲೀನದ ನಂತರ ಸಂಜೋಗ್ ಗುಪ್ತಾ ಅವರನ್ನು ಜಿಯೋಸ್ಟಾರ್ ಸ್ಪೋರ್ಟ್ಸ್‌ನ ಸಿಇಒ ಆಗಿ ನೇಮಿಸಲಾಯಿತು. ಐಸಿಸಿಯ ಸಿಇಒ ಹುದ್ದೆಯನ್ನು ಈ ಹಿಂದೆ ಆಸ್ಟ್ರೇಲಿಯನ್ನರಾದ ಡೇವಿಡ್ ರಿಚರ್ಡ್ಸ್, ಮಾಲ್ಕಮ್ ಸ್ಪೀಡ್ ಮತ್ತು ಅಲಾರ್ಡೈಸ್, ದಕ್ಷಿಣ ಆಫ್ರಿಕನ್ನರಾದ ಡೇವಿಡ್ ರಿಚರ್ಡ್ಸನ್ ಮತ್ತು ಆರನ್ ಲೋರ್ಗಟ್ ಮತ್ತು ಭಾರತ ಮೂಲದ ಮನು ಸಾಹ್ನಿ ನಿರ್ವಹಿಸಿದ್ದಾರೆ.
ತಮ್ಮ ನೇಮಕಾತಿಯ ಕುರಿತು ಸಂಜೋಗ್ ಗುಪ್ತಾ, 'ಕ್ರಿಕೆಟ್ ಅಭೂತಪೂರ್ವ ಬೆಳವಣಿಗೆಗೆ ಸಜ್ಜಾಗಿರುವ ಮತ್ತು ವಿಶ್ವಾದ್ಯಂತ ಸುಮಾರು 2 ಬಿಲಿಯನ್ ಅಭಿಮಾನಿಗಳ ಉತ್ಸಾಹಭರಿತ ಬೆಂಬಲವನ್ನು ಹೊಂದಿರುವ ಸಮಯದಲ್ಲಿ ಈ ಅವಕಾಶವನ್ನು ಪಡೆಯುವುದು ಒಂದು ಸೌಭಾಗ್ಯ. ಪ್ರಮುಖ ಕಾರ್ಯಕ್ರಮಗಳ ಪ್ರಾಮುಖ್ಯತೆ ಹೆಚ್ಚುತ್ತಿರುವ ಕಾರಣ, ವಾಣಿಜ್ಯ ಅವಕಾಶಗಳು ಬೆಳೆಯುತ್ತಿರುವುದರಿಂದ ಮತ್ತು ಮಹಿಳಾ ಕ್ರೀಡೆಗಳಂತಹ ಸಂದರ್ಭಗಳ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಇದು ಕ್ರೀಡೆಗೆ ರೋಮಾಂಚಕಾರಿ ಸಮಯ. ಲಾಸ್ ಏಂಜಲೀಸ್ 2028 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮತ್ತು ತಂತ್ರಜ್ಞಾನದ ತ್ವರಿತ ಬೆಳವಣಿಗೆ / ಅಳವಡಿಕೆ ಪ್ರಪಂಚದಾದ್ಯಂತ ಕ್ರಿಕೆಟ್ ಚಳುವಳಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದರು.
ಐಸಿಸಿಯ 7ನೇ ಸಿಇಒ ಸಂಜೋಗ್ ಗುಪ್ತಾ
ಸಂಜೋಗ್ ಗುಪ್ತಾ ಐಸಿಸಿಯ ಏಳನೇ ಸಿಇಒ ಆಗಲಿದ್ದಾರೆ. ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯು ಈ ಹುದ್ದೆಗೆ 25 ದೇಶಗಳಿಂದ 2,500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಅದರಲ್ಲಿ 12 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಐಸಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 'ಅಭ್ಯರ್ಥಿಗಳಲ್ಲಿ ಆಟದ ಆಡಳಿತ ಮಂಡಳಿಗಳ ಅಧಿಕಾರಿಗಳು ಮತ್ತು ಕಾರ್ಪೊರೇಟ್ ಜಗತ್ತಿನ ಹಿರಿಯ ಅಧಿಕಾರಿಗಳು ಸೇರಿದ್ದಾರೆ' ಎಂದು ತಿಳಿಸಿದೆ.
Advertisement