
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿನ್ನೆ ಜುಲೈ 7ರಂದು 44ನೇ ಹುಟ್ಟುಹಬ್ಬವನ್ನು ತಮ್ಮ ತವರು ರಾಂಚಿಯಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರೊಂದಿಗೆ ಆಚರಿಸಿಕೊಂಡರು. ಧೋನಿ ಅವರು ಕೇಕ್ ಕತ್ತರಿಸಿ ಪ್ರೀತಿಪಾತ್ರರೊಂದಿಗೆ ಹಂಚಿಕೊಂಡು ತಿಂದು ನಗುತ್ತಿರುವ ಫೋಟೋ-ವಿಡಿಯೊಗಳು ವೈರಲ್ ಆಗಿವೆ,
ಮಹೇಂದ್ರ ಸಿಂಗ್ ಧೋನಿಯವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಧೋನಿ ಹುಟ್ಟುಹಬ್ಬದ ದಿನ ದಕ್ಷಿಣ ಭಾರತದ ವಿಜಯವಾಡದಂತಹ ಸ್ಥಳಗಳಲ್ಲಿ, ಬೃಹತ್ ಧೋನಿಯ ಕಟೌಟ್‌ಗಳನ್ನು ರಚಿಸಿ ನೇತುಹಾಕಿದ್ದಾರೆ. ಬೆಂಬಲಿಗರು ಚೆನ್ನೈ ಸೂಪರ್ ಕಿಂಗ್ಸ್ ಧ್ವಜಗಳನ್ನು ಬೀಸಿ ಖುಷಿಪಟ್ಟಿದ್ದಾರೆ. ಸಾಂಪ್ರದಾಯಿಕ ದಕ್ಷಿಣ ಭಾರತದ ಉಡುಪನ್ನು ಧರಿಸಿದ ಧೋನಿಯ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ. 2008 ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಸಿಎಸ್‌ಕೆ ಜೊತೆಗಿನ ಧೋನಿಯವರ ಶಾಶ್ವತ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಐದು ವರ್ಷಗಳಾದರೂ 44 ವರ್ಷದ ಧೋನಿಯವರು ಕ್ರಿಕೆಟ್ ನಲ್ಲಿ ಇನ್ನೂ ಪ್ರಭಾವಶಾಲಿಯಾಗಿ ಉಳಿದಿದ್ದಾರೆ. ಇತ್ತೀಚೆಗೆ 2025 ರ ಐಪಿಎಲ್ ಸೀಸನ್ ನಲ್ಲಿ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಂಡು ಆಡಿದ್ದರು. ತಂಡ ಕೊನೆಯ ಸ್ಥಾನದಲ್ಲಿದ್ದರೂ, ಅವರ ಶಾಂತ ನಾಯಕತ್ವವು ಒಟ್ಟುಗೂಡಿಸುವ ಶಕ್ತಿ ಮತ್ತು ಭರವಸೆಯ ಸಂಕೇತವಾಗಿತ್ತು. ಮುಂದಿನ ವರ್ಷ ಅವರು ತಂಡಕ್ಕೆ ಮರಳುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಊಹಾಪೋಹಗಳು ಉಳಿದಿವೆ. ಫ್ರಾಂಚೈಸಿಯೊಂದಿಗೆ ತಮ್ಮ ಮುಂದುವರಿಕೆ ನಿರ್ಧರಿಸಲು ಇನ್ನು ಐದಾರು ತಿಂಗಳಲ್ಲಿ ನಿರ್ಧರಿಸುವುದಾಗಿ ಧೋನಿ ಹೇಳಿದ್ದಾರೆ.
ಧೋನಿ ವೃತ್ತಿಬದುಕು, ಮೈಲುಗಲ್ಲು
ತಮ್ಮ ವೃತ್ತಿ ಜೀವನದಲ್ಲಿ, 538 ಅಂತಾರಾಷ್ಟ್ರೀಯ ಪಂದ್ಯಗಳು, 17,266 ರನ್‌ಗಳು ಮತ್ತು 829 ಔಟ್‌ಗಳನ್ನು ಹೊಂದಿದ್ದು, ಪರಂಪರೆಯನ್ನೇ ಸೃಷ್ಟಿಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ, ಅವರು 10 ಶತಕಗಳು, 73 ಅರ್ಧಶತಕಗಳು ಸೇರಿದಂತೆ 50.57 ಸರಾಸರಿಯಲ್ಲಿ 10,773 ರನ್‌ಗಳನ್ನು ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಅವರ ಅಜೇಯ 183 ರನ್‌ಗಳು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ನೆನಪಿನಲ್ಲಿ ಅಚ್ಚೊತ್ತಿವೆ. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 10,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿಯವರು 90 ಪಂದ್ಯಗಳನ್ನು ಆಡಿದ್ದಾರೆ — ನಾಯಕನಾಗಿ 60 ಪಂದ್ಯಗಳಲ್ಲಿ ಸುಮಾರು 5,000 ರನ್ ಗಳಿಸಿದ್ದಾರೆ, ಇದರಲ್ಲಿ 224 ಗರಿಷ್ಠ ಸ್ಕೋರ್ ಸೇರಿದೆ. ಮೂರು ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕ ಅವರು: 2007ರ ಟಿ 20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ.
ಕ್ರಿಕೆಟ್ ನಲ್ಲಿ ಸ್ಕೋರ್ , ಟ್ರೋಫಿಗಳನ್ನು ಮೀರಿ ಅವರ ನಮ್ರತೆ, ಶಾಂತಸ್ವಭಾವದ ನಾಯಕತ್ವ ಮತ್ತು ಘನತೆಯಿಂದ ನಿವೃತ್ತಿ ಹೇಳಿದ್ದು ಮತ್ತಷ್ಟು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದೆ.
Advertisement