
ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುಕ್ರವಾರ ಲೀಡ್ಸ್ ನಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ , ಆಸ್ಟ್ರೇಲಿಯಾ (SENA)ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್ ಪ್ರಶಸ್ತಿಗಿಂತ ದೊಡ್ಡದು ಎಂದು ಹೇಳಿದರು.
ಐಪಿಎಲ್ ಟೂರ್ನಿಯು ಪ್ರತಿ ವರ್ಷವೂ ಬರುತ್ತದೆ. ಆದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ , ಆಸ್ಟ್ರೇಲಿಯಾದಲ್ಲಿ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಮಹತ್ತರವಾದದ್ದು ಎಂದರು.
ಗಿಲ್ ನೇತೃತ್ವದ ತಂಡ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಡಿದ ಅನುಭವಿಗಳ ಕೊರತೆ ಹೊಂದಿದೆ ಎಂಬ ಪ್ರಶ್ನೆಗೆ ಅವರು ವಿಚಲಿತರಾಗಲಿಲ್ಲ. ಬಹಳಷ್ಟು ಮಂದಿ ಅನನುಭವಿ ತಂಡ ಎಂದು ಹೇಳುತ್ತಾರೆ. ಆದರೆ, ಅನೇಕ ಸಕಾರಾತ್ಮಕ ಅಂಶಗಳಿದ್ದು, ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ. ಏಕೆಂದರೆ ಎಲ್ಲಾ ಆಟಗಾರರು ನಿಜವಾಗಿಯೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿಲ್ಲ ಎಂದರು.
ವಿರಾಟ್ ಕೊಹ್ಲಿ ನಿವೃತ್ತಿ ಬಳಿಕ ನಾನು ಸಹ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಚ್ಚಿಸಿದ್ದು, ಈ ಸಂಬಂಧ ಕೋಚ್ ಗೌತಮ್ ಗಂಬೀರ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ಐಪಿಎಲ್ ಟೂರ್ನಿ ವೇಳೆಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿದ್ದು, ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ನಾವು ಎದುರಿಸಬಹುದಾದ ಕೆಲವು ಸವಾಲುಗಳ ಬಗ್ಗೆ ಅವರಿಂದ ಮಾಹಿತಿ ಪಡೆದಿರುವುದಾಗಿ ಹೇಳಿದರು.
ತಂಡದಲ್ಲಿ ಸುರಕ್ಷಿತ" ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಹಾಗೇ ಆದಲ್ಲಿ ನಮ್ಮ ಟೆಸ್ಟ್ ಸರಣಿ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಯಶಸ್ಸನ್ನು ಮುಂದುವರೆಸುವಂತಾಗಲಿದೆ ಎಂದು ಭಾವಿಸುವುದಾಗಿ ತಿಳಿಸಿದರು.
Advertisement