
ಕೋಲ್ಕತ್ತಾ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 38 ಅದ್ಭುತ ಶತಕಗಳ ಒಡೆಯನಾಗಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬಹಳಷ್ಟು ಶತಕಗಳನ್ನು ಮಿಸ್ ಮಾಡಿಕೊಂಡೆ ಎಂದು ಸೋಮವಾರ ಬೇಸರ ವ್ಯಕ್ತಪಡಿಸಿದ್ದಾರೆ.
ಎಡಗೈ ಬೌಲರ್ ಗಂಗೂಲಿ ಟೆಸ್ಟ್ ಮತ್ತು ಏಕದಿನಗಳಲ್ಲಿ ಒಟ್ಟು 18575 ರನ್ ಗಳಿಸಿದ್ದಾರೆ. ಆದರೆ 311 ಏಕದಿನ ಮತ್ತು 113 ಟೆಸ್ಟ್‌ಗಳನ್ನು ಆಡಿದ ಗಂಗೂಲಿ ಅವರು ತಮ್ಮ ವೃತ್ತಿಜೀವನದಲ್ಲಿ ಇನ್ನಷ್ಟು ಶತಕಗಳನ್ನು ಗಳಿಸಬೇಕಿತ್ತು ಎಂದು ಹೇಳಿದ್ದಾರೆ.
ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಏನು ಹೇಳಲು ಬಯಸುತ್ತೀರಿ ಎಂದು ಕೇಳಿದಾಗ, ಸೌರವ್ ಗಂಗೂಲಿ ಅವರು ಈ ವಿಷಾದ ವ್ಯಕ್ತಪಡಿಸಿದ್ದಾರೆ.
"ನಾನು ಬಹಳಷ್ಟು ಶತಕಗಳನ್ನು ತಪ್ಪಿಸಿಕೊಂಡೆ, ನಾನು ಇನ್ನೂ ಹೆಚ್ಚು ಶತಕಗಳನ್ನು ಗಳಿಸಬೇಕಾಗಿತ್ತು. ಹಲವು ಬಾರಿ 90 ಮತ್ತು 80ರನ್ ಗಳಿಗೆ ಔಟ್ ಆಗಿದ್ದೇನೆ" ಎಂದು ಗಂಗೂಲಿ ಪಿಟಿಐಗೆ ನೀಡಿದ ಸಂವಾದದಲ್ಲಿ ತಿಳಿಸಿದ್ದಾರೆ.
ಅವರ ಅಂಕಿಅಂಶಗಳನ್ನು ನೋಡಿದರೆ ಗಂಗೂಲಿ ಅವರು 80 ಮತ್ತು 90 ರನ್ ಗಳಿಗೆ 30 ಬಾರಿ ಔಟ್ ಆಗಿದ್ದಾರೆ.
ನಾನು ಒಬ್ಬಂಟಿಯಾಗಿರುವಾಗ ನನ್ನ ಬ್ಯಾಟಿಂಗ್ ವಿಡಿಯೋಗಳನ್ನು ನೋಡುತ್ತೇನೆ. ಆಗ ಮತ್ತಷ್ಟು ಶತಕಗಳನ್ನು ಗಳಿಸಲು ನಾನು ಎಷ್ಟು ಹತ್ತಿರದಲ್ಲಿದ್ದೆ ಎಂಬುದನ್ನು ಆ ವಿಡಿಯೋಗಳು ನನಗೆ ನೆನಪಿಸುತ್ತವೆ ಎಂದಿದ್ದಾರೆ.
ಮಗಳು ಸನಾ ಲಂಡನ್‌ನಲ್ಲಿರುವುದರಿಂದ ನನ್ನ ಹೆಂಡತಿ ಲಂಡನ್ ಗೆ ತೆರಳಿದಾಗ ನಾನು ಯೂಟ್ಯೂಬ್‌ನಲ್ಲಿ ಹಳೆಯ ಪಂದ್ಯಗಳನ್ನು ನೋಡುತ್ತೇನೆ. 'ಅರೆ ಫಿರ್ 70 ಪೆ ಔಟ್ ಹೋ ಗಯಾ'(ಅಯ್ಯೋ ಮತ್ತೆ 70ಕ್ಕೆ ಔಟ್ ಆದೆ) ಎಂದು ಹೇಳುತ್ತೇನೆ. ಶತಕ ಗಳಿಸಬೇಕಿತ್ತು ಎಂದುಕೊಳ್ಳುತ್ತೇನೆ. ಆದರೆ ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
Advertisement