
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹ ದಪ್ಪ ಹಾಗೂ ಫಿಟ್ ನೆಸ್ ಇಲ್ಲ ಮತ್ತು ಕಳಪೆ ನಾಯಕತ್ವ ಎಂದು ಟೀಕಿಸಿ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ವಿವಾದ ಸೃಷ್ಟಿಸಿದ್ದಾರೆ.
ಕ್ರೀಡಾಪಟುವಾಗಿ ರೋಹಿತ್ ಶರ್ಮಾ ದಪ್ಪಗಿದ್ದಾರೆ, ತೂಕ ಇಳಿಸಿಕೊಳ್ಳಬೇಕು. ಮತ್ತು ಖಂಡಿತವಾಗಿಯೂ, ಭಾರತ ಕಂಡ ಅತ್ಯಂತ ಕಳಪೆ ನಾಯಕ ಇವರೇ ಎಂದು ಮೊಹಮ್ಮದ್ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, “ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಮತ್ತು ಉಳಿದವರಿಗೆ ಹೋಲಿಸಿದರೆ ಅವರಲ್ಲಿ ಜಗತ್ತಿಗೆ ಮಾದರಿಯಾಗುವಂತಹದ್ದೇನಿದೆ? ಅವರು ಸಾಧಾರಣ ಆಟಗಾರರಾಗಿದ್ದು, ಭಾರತದ ನಾಯಕರಾಗಲು ಅದೃಷ್ಟವಿತ್ತು ಅಷ್ಟೇ” ಎಂದು ಹೇಳಿದ್ದಾರೆ.
ಭಾನುವಾರ ತಡರಾತ್ರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮೊಹಮ್ಮದ್, ರೋಹಿತ್ ಶರ್ಮಾ ಅವರನ್ನು "ದಪ್ಪ" ಎಂದು ಕರೆದಿದ್ದಾರೆ ಮತ್ತು ಅವರನ್ನು "ಸಾಧಾರಣ ನಾಯಕ" ಎಂದು ಟೀಕಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಕಪಿಲ್ ದೇವ್ ಅವರಂತಹ ಕ್ರಿಕೆಟ್ ದಂತಕಥೆಗಳಿಗೆ ಹೋಲಿಸಿ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ.
ಶಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ‘ಕಾಂಗ್ರೆಸ್‌ಗೆ ಇದು ಅವಮಾನದ ಸಂಗತಿಯಾಗಿದೆ. ಎಲ್ಲವನ್ನೂ ಬಿಟ್ಟು ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕನ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ರಾಜಕೀಯದಲ್ಲಿ ವಿಫಲವಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಕ್ರಿಕೆಟ್ ಆಡುತ್ತಾರೆ ಎಂದು ಅವರು ನಿರೀಕ್ಷಿಸುತ್ತಾರೆಯೇ?’ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಶಮಾ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಪ್ರತಿಕ್ರಿಯಿಸಿದ್ದು, ವಕ್ತಾರ ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ಪಕ್ಷದ ಚುನಾವಣಾ ದಾಖಲೆಯನ್ನು ಟೀಕಿಸಿದ್ದಾರೆ. “ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 90 ಚುನಾವಣೆಗಳನ್ನು ಸೋತವರು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಕಳಪೆ ಎಂದು ಕರೆಯುತ್ತಿದ್ದಾರೆ! ಎಂದು ಪೂನಾವಾಲಾ ಹೇಳಿದ್ದಾರೆ.
ಶರ್ಮಾ ಅವರ ಅರ್ಹತೆಗಳನ್ನು ಸಮರ್ಥಿಸಿಕೊಂಡ ಅವರು, ಇತ್ತೀಚಿನ ಯಶಸ್ಸನ್ನು ಎತ್ತಿ ತೋರಿಸಿದ್ದಾರೆ. “ದೆಹಲಿಯಲ್ಲಿ ಆರು ಡಕ್‌ಗಳು ಮತ್ತು 90 ಚುನಾವಣಾ ಸೋಲುಗಳು ಪ್ರಭಾವಶಾಲಿಯಾಗಿವೆ ಎಂದು ನಾನು ಭಾವಿಸುತ್ತೇನೆ, ಆದರೆ ಟಿ 20 ವಿಶ್ವಕಪ್ ಗೆಲ್ಲುವುದು ಅಲ್ಲ! ರೋಹಿತ್ ನಾಯಕರಾಗಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ!”
ದಶಕಗಳ ಕಾಲ ಕ್ರೀಡಾಪಟುಗಳನ್ನು ಅವಮಾನಿಸಿ, ಅವರಿಗೆ ಮಾನ್ಯತೆ ನಿರಾಕರಿಸಲಾಯಿತು. ಈಗ ಕ್ರಿಕೆಟ್ ದಂತಕಥೆಯನ್ನು ಅಣಕಿಸುವ ಧೈರ್ಯ ಮಾಡುತ್ತಿದೆ ಕಾಂಗ್ರೆಸ್? ಎಂದು ಬಿಜೆಪಿ ನಾಯಕಿ ರಾಧಿಕಾ ಖೇರಾ ಹೇಳಿದರು.
ಕ್ರಿೀಡಾಪಟುವಿನ ಫಿಟ್ನೆಸ್ ಬಗ್ಗೆ ಮಾಡಿದ್ದ ಸಾಮಾನ್ಯ ಟ್ವೀಟ್ ಆಗಿತ್ತು. ಇದರಲ್ಲಿ ಬಾಡಿ ಶೇಮಿಂಗ್ ಮಾಡುವಂತಿರಲಿಲ್ಲ. ಒಬ್ಬ ಕ್ರೀಡಾಪಟು ಫಿಟ್ ಆಗಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೆ, ಮತ್ತು ಆದರೆ ರೋಹಿತ್ ಸ್ವಲ್ಪ ಅಧಿಕ ತೂಕ ಹೊಂದಿದ್ದಾರೆ ಎಂದು ನನಗೆ ಅನಿಸಿತು, ಆದ್ದರಿಂದ ನಾನು ಅದರ ಬಗ್ಗೆ ಟ್ವೀಟ್ ಮಾಡಿದೆ. . ಹೇಳುವುದರಲ್ಲಿ ತಪ್ಪೇನು? ಇದು ಪ್ರಜಾಪ್ರಭುತ್ವ ಎಂದು ಶಮಾ ಮೊಹಮ್ಮದ್ ಸ್ಪಷ್ಟನೆ ನೀಡಿದ್ದಾರೆ.
Advertisement