
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಕ್ತಾಯಗೊಂಡಿದ್ದು, ನಾಮ್ ಕೇ ವಾಸ್ತೆ ಆತಿಥ್ಯ ವಹಿಸಿದ್ದ ಪಾಕ್ ಕ್ರಿಕೆಟ್ ಮಂಡಳಿಗೆ ಭರ್ಜರಿ ಹೊಡೆತ ಬಿದ್ದಿದೆ.
ಟೂರ್ನಿಯಲ್ಲಿ ಹಿನ್ನಡೆ ಅನುಭವಿಸುವುದರ ಜೊತೆಗೆ ಆರ್ಥಿಕವಾಗಿಯೂ ಪಾಕ್ ಕ್ರಿಕೆಟ್ ಮಂಡಳಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಮೂಲಕ ಪಿಸಿಬಿ 85 ಮಿಲಿಯನ್ ಯುಎಸ್ ಡಾಲರ್ (INR 869 ಕೋಟಿ) ನಷ್ಟವನ್ನು ಅನುಭವಿಸಿದೆ. ಬಹುತೇಕ ಪಂದ್ಯಗಳು ಅಂದರೆ ಅರ್ಧಕ್ಕಿಂತ ಹೆಚ್ಚಿನ ಪಂದ್ಯಗಳು ದುಬೈ ನಲ್ಲಿ ನಡೆದಿತ್ತು. ಭಾರತ ಪಾಕ್ ಗೆ ಹೋಗಲು ನಿರಾಕರಿಸಿದ್ದರ ಪರಿಣಾಮ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಿಸಿಬಿ ವಹಿಸಿತ್ತಾದರೂ, ಪಾಕಿಸ್ತಾನದಲ್ಲಿ ನಡೆದದ್ದು ಕೇವಲ ಒಂದೇ ಒಂದು ಪಂದ್ಯ! ಈ ಟೂರ್ನಿಗೆ ತಯಾರಿ ಮಾಡಿಕೊಂಡಿದ್ದ ಪಾಕಿಸ್ತಾನ 869 ಕೋಟಿ ನಷ್ಟ ಅನುಭವಿಸಿದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ ಕ್ರಿಕೆಟ್ ಮಂಡಳಿ ರಾವಲ್ಪಿಂಡಿ, ಲಾಹೋರ್, ಕರಾಚಿ ಸ್ಟೇಡಿಯಂ ಗಳನ್ನು ನವೀಕರಿಸಿತ್ತು. ಇದಕ್ಕಾಗಿ ಸುಮಾರು 58 ಮಿಲಿಯನ್ ಡಾಲರ್ ಅಂದರೆ 503 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಟೂರ್ನಿಯ ಈವೆಂಟ್ ಸಿದ್ಧತೆಗಳಿಗಾಗಿ 347 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಆದರೆ ಪಿಸಿಬಿಗೆ ಆತಿಥ್ಯ ವಹಿಸಿದ ಶುಲ್ಕ, ಪ್ರಾಯೋಜಕತ್ವ ಹಾಗೂ ಟಿಕೆಟ್ ಮಾರಾಟದಿಂದ ವಾಪಸ್ ಬಂದ ಹಣ ಕೇವಲ 52 ಕೋಟಿ ರೂಪಾಯಿಗಳು ಮಾತ್ರ!
ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಗ್ರೂಪ್ ಎ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಲಾಹೋರ್‌ನಲ್ಲಿ ಸೋಲು ಅನುಭವಿಸಿದ ಪಾಕಿಸ್ತಾನ, ನಂತರ ದುಬೈಗೆ ಪ್ರಯಾಣ ಬೆಳೆಸಿ ಭಾರತವನ್ನು ಎದುರಿಸಿತು. ಬಾಂಗ್ಲಾದೇಶ ವಿರುದ್ಧದ ಅವರ ಮೂರನೇ ಮತ್ತು ಅಂತಿಮ ಗ್ರೂಪ್ ಪಂದ್ಯವು ಒಂದೇ ಒಂದು ಚೆಂಡು ಎಸೆಯದೆ ಮಳೆಯಲ್ಲಿ ರದ್ದಾಗಿತ್ತು. ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧದ ಸೋಲಿನಿಂದಾಗಿ, ಪಾಕಿಸ್ತಾನವು ಟೂರ್ನಮೆಂಟ್‌ನಿಂದ ಹೊರಬಿತ್ತು, ಆದ್ದರಿಂದ ಕೇವಲ ಒಂದು ತವರು ಪಂದ್ಯದೊಂದಿಗೆ ಟೂರ್ನಿಯಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಕೊನೆಗೊಳಿಸಿತು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಮೂಲಕ ಪಿಸಿಬಿ ಸುಮಾರು 85 ಮಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಅನುಭವಿಸಿದೆ ಎಂದು ದಿ ಟೆಲಿಗ್ರಾಫ್ ವರದಿ ಪ್ರಕಟಿಸಿದೆ. ಅಂತಹ ಸೋಲಿನ ಪರಿಣಾಮಗಳು ಮಂಡಳಿಯ ಕೆಲವು ನಂತರದ ಯೋಜನೆಗಳಲ್ಲಿ ಕಂಡುಬರುತ್ತಿವೆ.
ಈ ಸೋಲು ಹಾಗೂ ನಷ್ಟದಿಂದಾಗಿ PCB ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ನ ಪಂದ್ಯ ಶುಲ್ಕವನ್ನು ಶೇಕಡಾ 90 ರಷ್ಟು ಕಡಿಮೆ ಮಾಡಲು ಮತ್ತು ಮೀಸಲು ಆಟಗಾರರ ವೇತನವನ್ನು ಶೇಕಡಾ 87.5 ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ.
ಪಾಕಿಸ್ತಾನದ ಡಾನ್ ಪ್ರಕಾರ, "ಯಾವುದೇ ಅಧಿಕೃತ ಘೋಷಣೆಯಿಲ್ಲದೆ ಪಿಸಿಬಿ ಇತ್ತೀಚೆಗೆ ಪಂದ್ಯ ಶುಲ್ಕವನ್ನು ರೂ 40,000 ರಿಂದ ರೂ 10,000 ಕ್ಕೆ ಇಳಿಸಿದೆ ಆದಾಗ್ಯೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಧ್ಯಪ್ರವೇಶಿಸಿ, ನಿರ್ಧಾರವನ್ನು ತಿರಸ್ಕರಿಸಿದರು ಮತ್ತು ಮಂಡಳಿಯ ದೇಶೀಯ ಕ್ರಿಕೆಟ್ ಇಲಾಖೆಗೆ ಈ ವಿಷಯವನ್ನು ಮರು ಮೌಲ್ಯಮಾಪನ ಮಾಡಲು ನಿರ್ದೇಶಿಸಿದರು."
ಇದೇ ವೇಳೆ ಆಟಗಾರರಿಗೆ 5-ಸ್ಟಾರ್ ವಸತಿ ಸೌಲಭ್ಯಗಳನ್ನು ಸಹ ಎಕಾನಮಿ ಹೋಟೆಲ್‌ಗಳೊಂದಿಗೆ ಬದಲಾಯಿಸಲಾಗಿದೆ.
Advertisement