
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್(IPL)ನ 59ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಪಂಜಾಬ್ ಪೂರ್ಣ ಎರಡು ಅಂಕಗಳನ್ನು ಕಲೆ ಹಾಕಿ, ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಇಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್ ಸೇರಿಸಿತು.
ಗೆಲುವಿಗೆ 220 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿ 10 ರನ್ ಗಳಿಂದ ಸೋಲೊಪ್ಪಿಕೊಂಡಿತು.
ಪಂಜಾಬ್ ಈಗ 17 ಅಂಕಗಳೊಂದಿಗೆ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ ಮತ್ತು ಪ್ಲೇ-ಆಫ್‌ಗೆ ಪರಿಣಾಮಕಾರಿಯಾಗಿ ಅರ್ಹತೆ ಪಡೆದಿದೆ.
34 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಂಜಾಬ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನೆಹಾಲ್ ವಧೇರಾ, ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಈ ಜೋಡಿ ನೀಡಿದ ಭರ್ಜರಿ ಜೊತೆಯಾಟದ ಕಾರಣದಿಂದಲೇ ಪಂಜಾಬ್ ಕಿಂಗ್ಸ್ ಸವಾಲಿನ ಮೊತ್ತ ಸೇರಿಸಿತು.
ವಧೇರಾ, ಶ್ರೇಯಸ್ ಜೋಡಿ 44 ಎಸೆತಗಳಲ್ಲಿ 67 ರನ್ ಸೇರಿಸಿತು. ಶ್ರೇಯಸ್ ಅಯ್ಯರ್ 5 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಔಟ್ ಆದರು.
Advertisement