

ನವಿ ಮುಂಬೈ: ಭಾನುವಾರ ನಡೆದ ಮಹಿಳಾ ವಿಶ್ವಕಪ್ 2025 ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ನಾಯಕಿ ಹರ್ಮನ್ ಪ್ರೀತ್ ಕೌರ್ ಕೋಚ್ ಅಮೋಲ್ ಮುಜುಂದಾರ್ ಕಾಲಿಗೆ ಎರಗಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಡಿನ್ ಡಿ ಕ್ಲರ್ಕ್ ಅವರ ಕ್ಯಾಚ್ ಹಿಡಿದ ಹರ್ಮನ್ ಪ್ರೀತ್ ಕೌರ್ ನಂತರ ಭಾರತ ತಂಡ ಗೆಲುವಿನ ಸಂಭ್ರಮದಲ್ಲಿ ಮುಳುಗಿತು. ತದನಂತರ ಹರ್ಮನ್ ಪ್ರೀತ್ ಕೌರ್, ಅಮೋಲ್ ಮುಜುಂದಾರ್ ಬಳಿಗೆ ತೆರಳಿ ಅವರ ಕಾಲಿಗೆ ಎರಗುವ ಮೂಲಕ ಆಶೀರ್ವಾದ ಪಡೆದರು. ಹರ್ಮನ್ ಪ್ರೀತ್ ಕೌರ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಣಜಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಎಂದಿಗೂ ಆಡದ ಅಮೋಲ್ ಮುಜುಂದಾರ್ ಗೆ ಸಿಕ್ಕ ಅತ್ಯುತ್ತಮ ಗೌರವವಾಗಿದೆ. ಮಹಿಳಾ ವಿಶ್ವಕಪ್ ಲೀಗ್ ಹಂತದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತ ನಂತರವೂ ಅವರು ತಂಡವನ್ನು ಅದ್ಭುತವಾಗಿ ಒಟ್ಟುಗೂಡಿಸಿದ್ದರು.
ಎಂದಿಗೂ ರಾಷ್ಟ್ರೀಯ ತಂಡದಲ್ಲಿ ಆಡದ ಅಮೋಲ್ ಮುಜುಂದಾರ್!
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದ ಇವರು ಮಹಾರಾಷ್ಟ್ರದವರು. 1994 ರಲ್ಲಿ ಮುಂಬೈ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಅವರು ಮೊದಲ ಪಂದ್ಯದಲ್ಲೇ ಗರಿಷ್ಟ 260 ರನ್ ಹೊಡೆದಿದ್ದರು. 21 ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಿದ್ದ ಇವರು 48.13 ಸರಾಸರಿಯಲ್ಲಿ 11,167 ರನ್ ಹೊಡೆದಿದ್ದಾರೆ. ಕೆಲವು ಕಾರಣಗಳಿಂದಾಗಿ ಅವರಿಗೆ ಭಾರತಕ್ಕಾಗಿ ಆಡಲು ಒಂದೇ ಒಂದು ಅವಕಾಶವೂ ಸಿಕ್ಕಿರಲಿಲ್ಲ. ಕ್ರಿಕೆಟಿಗೆ 2012 ರಲ್ಲಿ ವಿದಾಯ ಹೇಳಿದ ನಂತರ ಕ್ರಿಕೆಟ್ ಕೋಚಿಂಗ್ ಮಾಡಲು ಆರಂಭಿಸಿದರು. ಅಕ್ಟೋಬರ್ 2023 ರಲ್ಲಿ ಬಿಸಿಸಿಐ ಅಮೋಲ್ ಮುಜುಂದಾರ್ ಅವರನ್ನು ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿತು.
ಪಂದ್ಯದ ನಂತರ ಮಾತನಾಡಿದ ಅಮೋಲ್ ಮುಜುಂದಾರ್, ಇದು ಖಂಡಿತ ಹೆಮ್ಮೆಯ ವಿಷಯವಾಗಿದೆ. ಈ ಗೆಲುವು ಮುಂದಿನ ಪೀಳಿಗೆಗೆ ಭಾರತೀಯ ಕ್ರಿಕೆಟ್ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ. ಇದಕ್ಕಾಗಿ ಎಲ್ಲ ಆಟಗಾರರು ಶ್ರಮಿಸಿದ್ದು, ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡಿದ್ದಾರೆ ಇದು ಭಾರತೀಯ ಕ್ರಿಕೆಟ್‌ಗೆ ಒಂದು ಮಹತ್ವದ ಕ್ಷಣವಾಗಿದೆ ಎಂದು ಅವರು ಹೇಳಿದರು.
Advertisement