

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡವನ್ನು ಮಾಜಿ ನಾಯಕಿ ಡಯಾನಾ ಎಡುಲ್ಜಿ ಶ್ಲಾಘಿಸಿದ್ದು, ಇದು ದೇಶಕ್ಕೆ ಹೆಮ್ಮೆಯ ಕ್ಷಣ ಮತ್ತು ಇದು "ನಮ್ಮ 1983ರ ಗೆಲುವಿನ ಕ್ಷಣ"ವನ್ನು ನೆನಪಿಸುತ್ತಿದೆ ಎಂದು ಬಣ್ಣಿಸಿದ್ದಾರೆ.
ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಆಟಗಾರ್ತಿಯರ ಪ್ರಯತ್ನಗಳು, ಬಿಸಿಸಿಐ ಮತ್ತು ಐಸಿಸಿಯನ್ನು ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಭಿನಂದಿಸಿದ್ದಾರೆ.
ಪಂದ್ಯದ ನಂತರ ANI ಜೊತೆ ಮಾತನಾಡಿದ ಡಯಾನಾ ಎಡುಲ್ಜಿ, "ಇದು ಹೆಮ್ಮೆಯ ಕ್ಷಣ. ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮಹಿಳಾ ಕ್ರಿಕೆಟ್ ಅನ್ನು ಇಷ್ಟು ಚೆನ್ನಾಗಿ ಪ್ರಚಾರ ಮಾಡಿದ್ದಕ್ಕಾಗಿ ತಂಡ, ಬಿಸಿಸಿಐ ಮತ್ತು ಐಸಿಸಿಯನ್ನು ನಾನು ಅಭಿನಂದಿಸುತ್ತೇನೆ. ಇದು ಅದ್ಭುತ ಗೆಲುವು. ನಮ್ಮ ಹುಡುಗಿಯರು ಎಲ್ಲಾ ಪ್ರಶಂಸೆಗಳಿಗೆ ಅರ್ಹರು ಎಂದರು.
ಇದು ನನಗೂ ತುಂಬಾ ಹೆಮ್ಮೆಯ ಕ್ಷಣ. ನಾನು 2017 ರಿಂದ ಇದಕ್ಕಾಗಿ ಕಾಯುತ್ತಿದ್ದೆ.. ಇದು ನಮಗೆ 1983ರ ಕ್ಷಣ... ಅಂದು U-19 ವಿಶ್ವಕಪ್ ಮತ್ತು ಈಗ ಹಿರಿಯರ ವಿಶ್ವಕಪ್ ಗೆದ್ದಿದ್ದಕ್ಕೆ ನಾನು ರಿಚಾ ಮತ್ತು ಶಫಾಲಿ ಅವರನ್ನು ಅಭಿನಂದಿಸುತ್ತೇನೆ" ಎಂದಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ಇದೀಗ ಹೊಸ ಯುಗವನ್ನು ಪ್ರವೇಶಿಸಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳೆಯರ ತಂಡ, ಚೊಚ್ಚಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿದ ಈ ಗೆಲುವು ಇಡೀ ಭಾರತವನ್ನು ಸಂಭ್ರಮಿಸುವಂತೆ ಮಾಡಿತು. ಕಿಕ್ಕಿರಿದು ತುಂಬಿದ್ದ ಡಿವೈ ಪಾಟೀಲ್ ಕ್ರೀಡಾಂಗಣವು ಹಿಂದೆಂದೂ ಕಾಣದ ರೀತಿಯಲ್ಲಿ ಘರ್ಜಿಸಿತು ಮತ್ತು ಸಾವಿರಾರು ಜನ ಆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
Advertisement