

ಅಬುದಾಬಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರ ನಡುವಿನ ಇತ್ತೀಚಿನ ವಿವಾದದ ನಡುವೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಬುಧವಾರ ಅಬುಧಾಬಿಯಲ್ಲಿ ನಡೆದ ಟಿ10 ಲೀಗ್‌ನಲ್ಲಿ ಹರ್ಭಜನ್ ಸಿಂಗ್ ಪಾಕಿಸ್ತಾನದ ವೇಗಿ ಶಹನವಾಜ್ ದಹಾನಿಗೆ ಹ್ಯಾಂಡ್ ಶೇಕ್ ಮಾಡಿರುವುದು ಕಂಡುಬಂದಿದೆ.
10 ಓವರ್‌ಗಳ ಪಂದ್ಯದಲ್ಲಿ ದಹಾನಿ 10 ರನ್ ಗಳಿಗೆ ಎರಡು ವಿಕೆಟ್ ಗಳಿಸುವುದರೊಂದಿಗೆ ಹರ್ಭಜನ್ ನೇತೃತ್ವದ ಆಸ್ಪಿನ್ ಸ್ಟಾಲಿಯನ್ಸ್ ತಂಡವು ನಾರ್ದರ್ನ್ ವಾರಿಯರ್ಸ್ ವಿರುದ್ಧ ನಾಲ್ಕು ರನ್‌ಗಳ ಸೋಲನ್ನು ಅನುಭವಿಸಿತು. ಕೊನೆಯ ಎಸೆತದಲ್ಲಿ ರನೌಟ್ ಆದ ಹರ್ಭಜನ್, ಪಂದ್ಯದ ನಂತರ ವಾರಿಯರ್ಸ್‌ನ ದಹಾನಿಗೆ ಹ್ಯಾಂಡ್ ಶೇಕ್ ಮಾಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬಾರದು ಎಂಬ ಭಾರತೀಯ ಕ್ರಿಕೆಟಿಗರ ಇತ್ತೀಚಿನ ನೀತಿಗೆ ಇದು ವ್ಯತಿರಿಕ್ತವಾಗಿತ್ತು.
ಕಳೆದ ವಾರ ದೋಹಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಭಾರತ ಎ ಮತ್ತು ಪಾಕಿಸ್ತಾನ್ ಶಾಹೀನ್ಸ್ ಆಟಗಾರ್ತಿಯರು ಪಂದ್ಯ ಪ್ರಾರಂಭವಾಗುವ ಮೊದಲು ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಕಳೆದ ತಿಂಗಳು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧದ ಮಹಿಳಾ ವಿಶ್ವಕಪ್ ಪಂದ್ಯದ ಸಮಯದಲ್ಲಿಯೂ ಭಾರತ ಮಹಿಳಾ ತಂಡವು ಹ್ಯಾಂಡ್‌ಶೇಕ್ ಮಾಡಿರಲಿಲ್ಲ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಜುಲೈ 19 ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ವರ್ಲ್ಡ್ ಚಾಂಪಿಯನ್ಸ್ ಟೂರ್ನಿಯಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಹಿಂದೇಟು ಹಾಕಿದ್ದರು.
ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಈ ವರ್ಷ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಮಾರ್ಚ್ 9 ರಂದು ನಡೆದ ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು.
Advertisement