ಟೆಸ್ಟ್ ಸರಣಿ ಸೋಲಿನ ನಂತರ ಕೋಚ್ ರಾಜೀನಾಮೆಗೆ ಹೆಚ್ಚಿದ ಒತ್ತಡ; BCCI ನಿರ್ಧಾರಕ್ಕೆ ಬಿಟ್ಟದ್ದು ಎಂದ ಗಂಭೀರ್
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಸರಣಿಯಲ್ಲಿ ಭಾರತ ಸೋತ ನಂತರ, ಅನೇಕ ಕ್ರಿಕೆಟ್ ಅಭಿಮಾನಿಗಳು "ಗೌತಮ್ ಗಂಭೀರ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಹೇಳುತ್ತಿದ್ದು, ಅವರ ಕಾರ್ಯವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಗೌತಮ್ ಗಂಭೀರ್ ಅವರು ಕೆಳಗಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿಲ್ಲ.
"ನನ್ನ ಭವಿಷ್ಯವನ್ನು ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟ ವಿಚಾರ" ಎಂದು ಗೌತಮ್ ಗಂಭೀರ ಅವರು ಹೇಳಿದ್ದಾರೆ.
ಗುವಾಹಟಿ ಬುಧವಾರ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 408 ರನ್‌ಗಳ ಹೀನಾಯ ಸೋಲಿನ ನಂತರ ಮಾತನಾಡಿದ ಗಂಭೀರ, ಈ ಹೀನಾಯ ಸೋಲಿಗೆ ಸಂಪೂರ್ಣ ಹೊಣೆಯನ್ನು ತಾವೇ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.
"ನನ್ನ ಭವಿಷ್ಯವನ್ನು ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟ ವಿಚಾರ. ಆದರೆ ಇಂಗ್ಲೆಂಡ್‌ನಲ್ಲಿ ನಿಮಗೆ ಫಲಿತಾಂಶ ತಂದುಕೊಟ್ಟ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತರಬೇತುದಾರನಾಗಿದ್ದು ಸಹ ನಾನೇ" ಎಂದು ಹೇಳುವ ಮೂಲಕ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತ್ತು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲೂ ಪ್ರಶಸ್ತಿ ಗೆದ್ದಿತ್ತು ಎಂದು ತಮ್ಮ ಸಾಧನೆಯ ಪಟ್ಟಿ ನೀಡಿದರು.
"ನಾವು ಇನ್ನೂ ಉತ್ತಮವಾಗಿ ಆಡಬೇಕಾಗಿದೆ. 95/1 ರಿಂದ 122/7ಕ್ಕೆ ಕುಸಿಯುವುದು ಒಪ್ಪಿಕೊಳ್ಳುವುಂತಹದಲ್ಲ. ನೀವು ಯಾವುದೇ ಒಬ್ಬ ಆಟಗಾರನನ್ನು ಅಥವಾ ಯಾವುದೇ ನಿರ್ದಿಷ್ಟ ಶಾಟ್ ಅನ್ನು ದೂಷಿಸುವುದಿಲ್ಲ. ದೂಷಣೆ ಎಲ್ಲರ ಮೇಲೂ ಇರುತ್ತದೆ. ನಾನು ಎಂದಿಗೂ ವ್ಯಕ್ತಿಗಳನ್ನು ದೂಷಿಸಿಲ್ಲ ಮತ್ತು ಮುಂದೆ ಅದನ್ನು ಮಾಡುವುದಿಲ್ಲ" ಎಂದು ಅವರು ಹೇಳಿದರು.
ಇನ್ನು ಗೌತಮ್ ಗಂಭೀರ್ ಅವರ ತಂಡದ ಆಯ್ಕೆ ಪ್ರಕ್ರಿಯೆ ಇದೀಗ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, ಪರಿಣತ ಬ್ಯಾಟರ್ ಗಳ ಬದಲಿಗೆ ಆಲ್-ರೌಂಡರ್‌ಗಳಿಗೆ ಅವರು ನೀಡುತ್ತಿರುವ ಪ್ರಾಮುಖ್ಯತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ದೂರದೃಷ್ಟಿಯನ್ನು ಅವರು ಸಮರ್ಥಿಸಿಕೊಂಡರು. "ಟೆಸ್ಟ್ ಕ್ರಿಕೆಟ್ ಆಡಲು ಅತ್ಯಂತ ಪ್ರತಿಭಾವಂತ ಆಟಗಾರರ ಅಗತ್ಯವಿಲ್ಲ. ನಮಗೆ ಕಠಿಣ ಮನೋಭಾವದ, ಸೀಮಿತ ಕೌಶಲ್ಯಗಳಿರುವ ಆಟಗಾರರು ಬೇಕು. ಅವರೇ ಉತ್ತಮ ಟೆಸ್ಟ್ ಆಟಗಾರರಾಗುತ್ತಾರೆ" ಎಂದು ಗಂಭೀರ್ ಹೇಳಿದರು.
ಗಂಭೀರ್ ನಾಯಕತ್ವದಲ್ಲಿ ಭಾರತ ತಂಡ 18 ಟೆಸ್ಟ್ ಪಂದ್ಯಗಳಲ್ಲಿ 10ರಲ್ಲಿ ಸೋತಿದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಅವಳಿ ವೈಟ್‌ವಾಶ್ ಸೇರಿದಂತೆ ಎರಡೂ ಪಂದ್ಯಗಳು ತವರಿನಲ್ಲಿ ನಡೆದಿವೆ.


