

ಮುಂಬಯಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ತಮ್ಮ ಬಾಲ್ಯದ ಗೆಳತಿ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕ ಅಂತಿಮಗೊಳಿಸಲಾಗಿದೆ ಎಂದು ವರದಿ ದೃಢಪಡಿಸಿದೆ. ಅರ್ಜುನ್ ತೆಂಡೂಲ್ಕರ್ ಮಾರ್ಚ್ 5 ರಂದು ಸಾನಿಯಾ ಅವರನ್ನು ಮದುವೆಯಾಗಲಿದ್ದಾರೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ ಅರ್ಜುನ್ ವರ್ಗಾವಣೆಗೊಂಡಿದ್ದು, ವೈಯಕ್ತಿಕ ಜೀವನದಲ್ಲಿ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಸಾನಿಯಾ ಚಂದೋಕ್ ಅವರು ಉದ್ಯಮ ಹಿನ್ನೆಲೆ ಇರುವ ಮನೆತನದಿಂದ ಬಂದವರು. ಅವರ ತಾತ ರವಿ ಘಾಯ್ ಅವರು ಗ್ರಾವಿಸ್ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ. ಈ ಗ್ರೂಪ್ ದಿ ಬ್ರೂಕ್ಲಿನ್ ಕ್ರೀಮೆರಿ ಮತ್ತು ಬಾಸ್ಕಿನ್ ರಾಬಿನ್ಸ್‌ನಂತಹ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇನ್ನು ಸದ್ಯಕ್ಕೆ ಸಾನಿಯಾ ಅವರು ಮುಂಬೈನಲ್ಲಿರುವ ಮಿಸ್ಟರ್ ಪಾಸ್ ಪೆಟ್ ಸ್ಪಾ & ಸ್ಟೋರ್ ಎಲ್ಎಲ್ಪಿ ಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಜೋಡಿ ಆಗಸ್ಟ್ 2025 ರಲ್ಲಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ಸಂಭ್ರಮಗಳು ಮಾರ್ಚ್ 3 ರಂದು ಪ್ರಾರಂಭವಾಗಲಿದ್ದು, ಮುಂಬೈನಲ್ಲಿ ಕಾರ್ಯಕ್ರಮಗಳು ನಡೆಯಲಿವೆ" ಎಂದು ಮೂಲಗಳು ತಿಳಿಸಿವೆ. ವಿವಾಹ ಸಮಾರಂಭದಲ್ಲಿ ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ, ಹಿರಿಯ ಕ್ರಿಕೆಟಿಗ ಸಚಿನ್ ತಮ್ಮ ಮಗನ ನಿಶ್ಚಿತಾರ್ಥದ ಸುದ್ದಿಯನ್ನು ಅಭಿಮಾನಿಯೊಬ್ಬರ ಕಾಮೆಂಟ್‌ಗೆ ಉತ್ತರಿಸುವ ಮೂಲಕ ದೃಢಪಡಿಸಿದರು, ಸಮಾರಂಭದ ಫೋಟೋಗಳು ಹೊರಬಂದ ನಂತರ ಅರ್ಜುನ್ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಎಂದು ಸಾಮಾಜಿಕ ಬಳಕೆದಾರರು ಕೇಳಿದ ರೆಡ್ಡಿಟ್ AMA (ಆಸ್ಕ್ ಮಿ ಎನಿಥಿಂಗ್) ನಲ್ಲಿ ಅವರು ತಮ್ಮ ಮಗನ ಸಂಬಂಧದ ಬಗ್ಗೆ ಮಾತನಾಡಿ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದರು.
Advertisement