ಪಾಕ್ ವಿರುದ್ಧ 26 ಎಸೆತಗಳಲ್ಲಿ 49 ರನ್! ಕೊನೆಯ ಎಸೆತದಲ್ಲಿ ಬೌಂಡರಿಯೊಂದಿಗೆ ಭಾರತಕ್ಕೆ ಗೆಲುವು ತಂದುಕೊಟ್ಟ ಮೋಹಿತ್ ಉಲ್ವಾ ಯಾರು?

ಪಾಕಿಸ್ತಾನ ನೀಡಿದ 338 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಸಂಕಷ್ಟದಲ್ಲಿದ್ದಾಗ, ಉಲ್ವಾ ಅವರ ಈ ಆಟ ಪಂದ್ಯದ ದಿಕ್ಕನ್ನೇ ಬದಲಿಸಿತು.
Mohit Ulva
ಮೋಹಿತ್ ಉಲ್ವಾ
Updated on: 

ಒಮಾನ್: ಇಂದು ನಡೆದ U19 ಏಷ್ಯಾ ಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತದ 18 ವರ್ಷದ ಮೋಹಿತ್ ಉಲ್ವಾ ಅವರ ಅತ್ಯದ್ಭುತ ಪ್ರದರ್ಶನದಿಂದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು.

10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಉಲ್ವಾ 26 ಎಸೆತಗಳಲ್ಲಿ ಅಜೇಯ 49 ರನ್ (ಐದು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳೊಂದಿಗೆ) ಸಿಡಿಸಿದರು. ಪಾಕಿಸ್ತಾನ ನೀಡಿದ 338 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಸಂಕಷ್ಟದಲ್ಲಿದ್ದಾಗ, ಉಲ್ವಾ ಅವರ ಈ ಆಟ ಪಂದ್ಯದ ದಿಕ್ಕನ್ನೇ ಬದಲಿಸಿತು. ಅವರು ಮನಲ್ ಚೌಹಾಣ್ ಅವರೊಂದಿಗೆ ನಿರ್ಣಾಯಕ ಜೊತೆಯಾಟ ಆಡಿದರು. ಅಲ್ಲದೇ ಅಂತಿಮ ಎಸೆತದಲ್ಲಿ ವಿನ್ನಿಂಗ್ ಶಾಟ್ ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಮೋಹಿತ್ ಉಲ್ವಾ ಯಾರು? ನವೆಂಬರ್ 30, 2007ರಂದು ಜನಿಸಿರುವ ಮೊಹಿತ್ ಉಲ್ವಾ ಗುಜರಾತ್‌ನ ಸೌರಾಷ್ಟ್ರಕ್ಕೆ ಸೇರಿದ 18 ವರ್ಷದ ಆಟಗಾರ. ಅವರು ಬಲಗೈ ಮಧ್ಯಮ ವೇಗದ ಬೌಲರ್ ಮತ್ತು ಬಲಗೈ ಬ್ಯಾಟರ್ ಆಗಿದ್ದಾರೆ. ತಮ್ಮ ಊರಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವ ಮೂಲಕ ಕ್ರಿಕೆಟ್ ಜರ್ನಿ ಪ್ರಾರಂಭಿಸಿದ ಅವರು, ನಂತರ ಸೌರಾಷ್ಟ್ರದ ವಿವಿಧ ವಯೋಮಿತಿ ತಂಡಗಳಲ್ಲಿ ಆಡುತ್ತಾ ಬೆಳೆದರು. ಜಾಮ್‌ನಗರದ 'ಕ್ರಿಕೆಟ್ ಬಂಗಲೆ' ಅಕಾಡೆಮಿಯಲ್ಲಿ ಮಹೇಂದ್ರಸಿನ್ಹ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ರವೀಂದ್ರ ಜಡೇಜಾ ಅವರ ಆರಂಭಿಕ ಕ್ರಿಕೆಟ್ ದಿನಗಳಲ್ಲಿ ಅವರಿಗೆ ತರಬೇತಿ ನೀಡಿದವರು ಇದೇ ಚೌಹಾಣ್ ಎಂಬುದು ವಿಶೇಷ.

ಫೈನಲ್ ಪಂದ್ಯದಲ್ಲಿ ಉಲ್ವಾ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಎಂಟು ಓವರ್‌ಗಳಲ್ಲಿ 57 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ, ಬ್ಯಾಟಿಂಗ್‌ನಲ್ಲಿ ಅವರು ನೀಡಿದ ಅಮೂಲ್ಯ ಕೊಡುಗೆಯಿಂದಾಗಿ ಭಾರತ U19 ಏಷ್ಯಾ ಕಪ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಯಿತು.

ಚೇಸಿಂಗ್ ಮಾಡುವಾಗ ಭಾರತ ತಂಡ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 52 ಎಸೆತಗಳಲ್ಲಿ 86 ರನ್‌ಗಳ ಅಗತ್ಯವಿದ್ದಾಗ ಕ್ರೀಸ್‌ಗೆ ಬಂದ ಉಲ್ವಾ, ಮನಲ್ ಚೌಹಾಣ್ ಅವರೊಂದಿಗೆ ಸೇರಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಈ ಜೋಡಿಯು ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು.

Mohit Ulva
U19 ಏಷ್ಯಾ ಕಪ್ ಫೈನಲ್‌ನಲ್ಲಿ ರೋಚಕ ಗೆಲುವು; ಸಂಭ್ರಮಾಚರಣೆ ನಡುವೆ ಪಾಕಿಗಳನ್ನು ಉರಿಸಿದ ಭಾರತದ ಆಟಗಾರರು! Video

ಈ ವೇಳೆ ಉಲ್ವಾ 188.46 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕಿದರು. ಅಂತಿಮವಾಗಿ ಅವರು 26 ಎಸೆತಗಳಲ್ಲಿ 49 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಭಾರತವು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿ, ಒಂದು ವಿಕೆಟ್ ಅಂತರದ ಸ್ಮರಣೀಯ ಗೆಲುವನ್ನು ದಾಖಲಿಸಿತು.

X