ಬೆರಗು ಮೂಡಿಸುವ ದಸರಾ ಬೊಂಬೆಗಳು

ನವರಾತ್ರಿಯ ಸಮಯದಲ್ಲಿ ಒಂಭತ್ತು ದಿನಗಳ ಕಾಲ “ಬೊಂಬೆ”ಗಳನ್ನು ಕೂರಿಸುತ್ತಾರೆ. ವಿವಿಧ ಬಗೆಯ ನವರಾತ್ರಿ ವಿಶೇಷವಾದ ಗೊಂಬೆಗಳು..
ದಸರಾ ಬೊಂಬೆಗಳು
ದಸರಾ ಬೊಂಬೆಗಳು

ನವರಾತ್ರಿಯ ಸಮಯದಲ್ಲಿ ಒಂಭತ್ತು ದಿನಗಳ ಕಾಲ “ಬೊಂಬೆ”ಗಳನ್ನು ಕೂರಿಸುತ್ತಾರೆ. ವಿವಿಧ ಬಗೆಯ ನವರಾತ್ರಿ ವಿಶೇಷವಾದ ಗೊಂಬೆಗಳು, ಶಿವ-ಪಾರ್ವತಿ, ಚಾಮುಂಡೇಶ್ವರಿ, ಸೇರಿದಂತೆ ವಿವಿಧ ದೇವರ ಗೊಂಬೆಗಳು, ಮತ್ತು ಸಾಮಾನ್ಯ ಗೊಂಬೆಗಳನ್ನು ಈ ಒಂಭತ್ತು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗುತ್ತದೆ.


 
ರಾಜರ ಅಳ್ವಿಕೆ ನೆನಪಿಸುವ ಬೊಂಬೆ ಪ್ರದರ್ಶನದ ಹಿಂದೆ ಇತಿಹಾಸವೇ ಇದೆ. ಇಂಥ ಬೊಂಬೆ ಇತಿಹಾಸಕ್ಕೆ ಮೂಲ ಕಾರಣ ಅಂಬಾವಿಲಾಸ ಅರಮನೆ. ಬೊಂಬೆ ಪ್ರದರ್ಶನ ಮೊಟ್ಟ ಮೊದಲಿಗೆ ಅರಮನೆಯಿಂದಲೇ ಆರಂಭಗೊಂಡ ಸಂಸ್ಕೃತಿ. ರಾಜಾಳ್ವಿಕೆ ಅಂತ್ಯಗೊಂಡಿದ್ದರು ಸಹ ಮೈಸೂರಿಗರ ಪಾಲಿಗೆ ಈ ಆಚರಣೆ ಇನ್ನು ಜೀವಂತವಾಗಿದೆ. ಅಂಬಾವಿಲಾಸ ಅರಮನೆಯಲ್ಲಿರುವ ಈ ಗೊಂಬೆಗಳನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪ್ರದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಈ ಬೊಂಬೆಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡು ಮತ್ತೆ ಮುಂದಿನ ವರ್ಷದ ನವರಾತ್ರಿ ವೇಳೆಗೆ ಬಳಸಲಾಗುತ್ತದೆ.

ಅಂದಾಜು ಸರಿಸುಮಾರು 150 ವರ್ಷಗಳ ಹಿಂದಿನ ಕಾಲದ ಈ ಬೊಂಬೆಗಳನ್ನು ನವರಾತ್ರಿ ಸಂದರ್ಭದಲ್ಲಿ ಮಾತ್ರ ಅರಮನೆಯಲ್ಲಿ ಇಡಲಾಗುತ್ತದೆ. ಬೆಳ್ಳಿ ಹಾಗೂ ಹಿತ್ತಾಳೆಯಲ್ಲಿ ರೂಪಿಸಿರುವ ರಾಜ- ರಾಣಿ ಬೊಂಬೆಗಳು ಈ ಪ್ರದರ್ಶನ ಪ್ರಮುಖ ಆಕರ್ಷಣೆ. ಮತ್ತೊಂದು ವಿಶೇಷ ಎಂದರೆ ಅರಮನೆಯ ಈ ರಾಜ- ರಾಣಿ ಬೊಂಬೆಯನ್ನು ಚಿನ್ನದ ಆಭರಣಗಳಿಂದ ಸಿಂಗಾರಗೊಳಿಸಿರುವುದು. ಇದರ ಜತೆಗೆ ಶ್ರೀಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವ ವಿಗ್ರಹಗಳನ್ನು ಸಹ ಪ್ರದರ್ಶಿಸಲಾಗಿತ್ತು.

ಇತಿಹಾಸ ಸಾರುವ ಅರಮನೆಯಲ್ಲಿನ ಈ ಬೊಂಬೆಗಳಿಗೂ ಇತಿಹಾಸವಿದೆ. 150 ವರ್ಷಗಳ ಹಿಂದೆ ಮರದಲ್ಲಿ ಕೆತ್ತಿರುವ ಈ ಬೊಂಬೆಗಳು ಅತ್ಯಂತ ಹಗುರವಾಗಿದ್ದು, ನೋಡಲು ಅತ್ಯಾಕರ್ಷಕವಾಗಿದೆ. ರಾಜರ ಆಸ್ಥಾನದಲ್ಲಿದ್ದ ಮಂತ್ರಿಗಳು, ಸೇನಾಪತಿಗಳು, ಸಂಗೀತ ವೃಂದ, ನೃತ್ಯಗಾರ್ತಿಯರನ್ನು ಬೊಂಬೆಗಳ ರೂಪದಲ್ಲಿ ಕೆತ್ತಲಾಗಿದೆ. ಆ ಕಾಲದಲ್ಲಿ ಅವರು ಧರಿಸುತ್ತಿದ್ದ ಬಣ್ಣದ ಬಟ್ಟೆಗಳನ್ನೇ ಬೊಂಬೆಗಳಿಗೂ ಅಳವಡಿಸಲಾಗಿದೆ. ಆ ಮೂಲಕ ಅಂದಿನ ಆಳ್ವಿಕೆಯ ಗತ ವೈಭವ ಇಂದಿನ ಮಂದಿಗೂ ಕಣ್ಣಿಗೆ ಕಟ್ಟುವಂತೆ ಈ ಬೊಂಬೆಗಳು ಕಥೆ ಹೇಳುತ್ತವೆ.

ದುರ್ಗಾದೇವಿಯ ಶಕ್ತಿ ಪೂಜೆಯ ಸಂಕೇತವಾಗಿ ಗೊಂಬೆ ಕೂರಿಸಲಾಗುತ್ತದೆಯಂತೆ. ಅಂದರೆ ಮಹಿಷಾಸುರನ ಮರ್ಧನಕ್ಕೆ ದುರ್ಗೆಗೆ ಶಕ್ತಿ ಸಾಲದ ಸಮಯದಲ್ಲಿ ದೇವತೆಗಳೆಲ್ಲ ತಮ್ಮ ಶಕ್ತಿಯನ್ನು ದೇವಿಗೆ ನೀಡಿ ತಾವು ಗೊಂಬೆಗಳಾಗಿ ಕುಳಿತವಂತೆ. ಅದೇ ನಂಬಿಕೆ ಮೇಲೆ ಶುರುವಾದ ಗೊಂಬೆ ಪ್ರದರ್ಶನ ಮಹಾಭಾರತ, ರಾಮಾಯಣ ಸೇರಿದಂತೆ ಪುರಾಣ ಕತೆಗಳನ್ನು ಬಿಂಬಿಸುವುದಕ್ಕೆ ಸೀಮಿತವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಧುನಿಕ  ಗೊಂಬೆಗಳು ಜೀವ ತಳೆಯುತ್ತಿವೆ.

ಪರಿಸರ ಮಾಲಿನ್ಯ, ಭ್ರಷ್ಟಾಚಾರ, ಉಗ್ರರ ದಾಳಿ, ಪ್ರಕೃತಿ ವಿಕೋಪ ಸೇರಿದಂತೆ ನಾನಾ ಬಗೆಯ ಪರಿಕಲ್ಪನೆಗಳು ಪ್ರಸಿದ್ಧಿಯಾಗುತ್ತಿವೆ. ಕಾಲ ಬದಲಾದಂತೆ ಗೊಂಬೆಗಳ ಸ್ವರೂಪ ಬದಲಾಗುತ್ತವೆ. ಕೇವಲ ಮಾರುಕಟ್ಟೆಯಲ್ಲಿ ಸಿಗುವಂಥ ಗೊಂಬೆಗಳನ್ನು ಕೊಳ್ಳುವುದಲ್ಲ, ತಮಗೆ ಬೇಕಾದ ಮಾದರಿಯ ಗೊಂಬೆಗಳನ್ನು ಥೀಮ್‌ಗೆ ತಕ್ಕಂತೆ ಹೇಳಿ ಮಾಡಿಸಿಕೊಳ್ಳುತ್ತಾರೆ.

ನಾಲ್ಕೈದು ಅಂತಸ್ತಿನಲ್ಲಿ ನಿಗದಿತ ಪರಿಕಲ್ಪನೆಯಡಿ ಗೊಂಬೆ ಕೂರಿಸುವುದು ಅಂದರೆ ಸುಲಭವಲ್ಲ. ಅದಕ್ಕಾಗಿಯೇ ತಿಂಗಳುಗಟ್ಟಲೆ ತಯಾರಿ ನಡೆಸಬೇಕು. ಸೃಜನಶೀಲತೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವುಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕು. ಇದಕ್ಕೆಲ್ಲ ಸಮಯ, ಶ್ರಮ ಎರಡೂ ಬೇಕು. ಆದರೆ ಈಗ ನೀವು ಬಯಸಿದರೆ ನಿಮ್ಮ ಮನೆಗೆ ಬಂದು ಗೊಂಬೆ ಕೂರಿಸಿ ಕೊಡುವವರು ಸಿಗುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com