ಜಗತ್ಪ್ರಸಿದ್ದ ಮೈಸೂರಿನ ಅಂಬಾವಿಲಾಸ ಅರಮನೆ ನಿರ್ಮಾಣದ ಇತಿಹಾಸ

ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಅರಮನೆಗಳ ನಗರಿ ಎಂದೇ ಪ್ರಸಿದ್ದವಾಗಿರುವ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಸೂಜಿಗಲ್ಲಿನಂತೆ ಸೆಳೆಯುತ್ತದೆ. ..
ಮೈಸೂರಿನ ಅಂಬಾ ವಿಲಾಸ ಅರಮನೆ
ಮೈಸೂರಿನ ಅಂಬಾ ವಿಲಾಸ ಅರಮನೆ

ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಅರಮನೆಗಳ ನಗರಿ ಎಂದೇ ಪ್ರಸಿದ್ದವಾಗಿರುವ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗಿ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು ಈ ಅಂಬಾ ವಿಲಾಸ ಅರಮನೆ.

ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ. ಈ ವೇಳೆ ಸಾರ್ವಜನಿಕ ವೀಕ್ಷಣೆಗೆ ಅರಮನೆ ಲಭ್ಯ. ಮೈಸೂರು ಅರಸರ ಕಾಲದ ಗತ ವೈಭವನ್ನು ಕಣ್ಣಲ್ಲಿ ತುಂಬಿಕೊಂಡಷ್ಟೂ ತುಳುಕುತ್ತದೆ. ನೋಡಿದಷ್ಟೂ ಮುಗಿಯುವುದಿಲ್ಲ. ಮತ್ತೆ ಮತ್ತೆ ಕಣ್ಮನ ಸೆಳೆಯುತ್ತದೆ ಅಂಬಾ ವಿಲಾಸ ಅರಮನೆ.

ಇಂಡೋ ಸಾರ್ಸನಿಕ್ ಶೈಲಿಯಲ್ಲಿ ಅಂಬಾವಿಲಾಸ ಅರಮನೆಯನ್ನು ಕಲ್ಲಿನಲ್ಲಿ ಕಟ್ಟಲಾಗಿದೆ. ಮೂರು ಮಹಡಿಗಳಿರುವ ಅರಮನೆಯ ಸುತ್ತಲೂ ವಿಶಾಲವಾದ ಹಸಿರು ಉದ್ಯಾನವಿದೆ. ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಒಳಗೆಲ್ಲಾ ಚಿನ್ನದ ಲೇಪನದ ಕಲಾ ವೈಭವ. ಈ ಅರಮನೆಯ ವಾಸ್ತುಶಿಲ್ಪಿ ಬ್ರಿಟಿಷ್ ಎಂಜಿನಿಯರ್ ಹೆನ್ರಿ ಇರ್ವಿನ್.

ಕ್ರಿ.ಶ. ೧೬೩೦ರಲ್ಲಿ ಸಿಡಿಲು ಬಡಿದು ಹಾನಿಯಾದ ಅರಮನೆಯನ್ನು ಕಂಠೀರವ ನರಸರಾಜ ಒಡೆಯರು ಅದೇ ಸ್ಥಳದಲ್ಲಿಯೇ ಪುನಃ ನಿರ್ಮಿಸಿದರು. ೧೮೦೧ರ ಒಳಗೆ ಪ್ರಾಚೀನ ಅರಮನೆ ಇದ್ದ ಸ್ಥಳದಲ್ಲಿಯೇ ಅದೇ ನಕ್ಷೆಯಂತೆ ಮರದ ಅರಮನೆಯೊಂದು ನಿರ್ಮಾಣವಾಯಿತ್ತೆಂದು ಐತಿಹಾಸಿಕ ದಾಖಲೆಗಳಿಂದ ನಮಗೆ ತಿಳಿದುಬರುತ್ತದೆ. ೧೮೯೭ರಲ್ಲಿ ಆಕಸ್ಮಿಕ ಅಗ್ನಿಸ್ಪರ್ಶದಿಂದಾಗಿ ಈ ಮರದ ಅರಮನೆಯು ನಾಶವಾಯಿತು. ನಂತರ 1897 ರಲ್ಲಿ ಈಗ ಇರುವ ಅಂಬಾವಿಲಾಸ ಅರಮನೆ ಕಟ್ಟಲು ಆರಂಭಿಸಿ 1912 ರಲ್ಲಿ ಅರಮನೆ ನಿರ್ಮಾಣ ಕಾರ್ಯ ಸಂಪೂರ್ಣವಾಯಿತು. ಅರಮನೆ ನಿರ್ಮಾಣಕ್ಕೆ ಸುಮಾರು 15 ವರ್ಷಗಳ ಸುದೀರ್ಘ ಕಾಲ ಹಿಡಿಯಿತು.

ಅಂಬಾವಿಲಾಸ ಅರಮನೆಯಲ್ಲಿ ವಿವಿಧ ರೀತಿಯ ವಾಸ್ತುಕಲೆಗಳನ್ನು ಸಂಯೋಜಿಸಲಾಗಿದ್ದು, ಹಿಂದೂ, ಮುಸ್ಲಿಂ ಮತ್ತು ಗೋಥಿಕ್ ಶೈಲಿಯ ವಾಸ್ತುವನ್ನು ಪ್ರಮುಖವಾಗಿ ಬಳಸಲಾಗಿದೆ. ಅರಮನೆಯ ಮುಂಭಾಗದಲ್ಲಿ ಏಳು ವಿಶಾಲವಾದ ಮತ್ತು ಎರಡು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲಿರುವ ಗಜಲಕ್ಷ್ಮಿಯ ಶಿಲ್ಪ ಹೃದಯಂಗಮವಾಗಿದೆ.

ಅರಮನೆಯ ಕೋಣೆಗಳು:

ಮೊಘಲ್ ದೊರೆಗಳ ಅರಮನೆಗಳ ಶೈಲಿಯ ದಿವಾನ್-ಇ-ಖಾಸ್ ಅತೀ ವೈಭವವದಿಂದ ಕೂಡಿದೆ. ಪ್ರಪಂಚದ ಪ್ರಮುಖ ಕಲೆಗಳ ಕೆತ್ತನೆ, ಅತಿ ಸುಂದರ ಸ್ತಂಭಗಳು, ಕರಿಮರದ ಕೆತ್ತನೆಯ ದಂತಖಚಿತ ವಿಶಾಲವಾದ ಬಾಗಿಲುಗಳು, ಹರಳುಗಳ ಅಲಂಕಾರ, ಕನ್ನಡಿಯಂದದ ನೆಲ, ಇವೆಲ್ಲವುಗಳ ಸೌಂದರ್ಯ ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಅಂತೆಯ ರಾಜರುಗಳು ದರ್ಬಾರು ನಡೆಸುತ್ತಿದ್ದ, ದರ್ಬಾರ್ ಹಾಲ್, ದಿವಾನ್-ಇ-ಆಮ್ ಕಲ್ಯಾಣ ಮಂಟಪ, ಗೊಂಬೆ ತೊಟ್ಟಿ ಇವುಗಳು ಇತಿಹಾಸವನ್ನು ಸಾರುತ್ತವೆ. ಕಲ್ಯಾಣ ಮಂಟಪದ ಗೋಡೆಯ ಮೇಲೆ ಬರೆದಿರುವ ಚಿತ್ತಾರಗಳು, ತೈಲವರ್ಣದ ಕಲಾಕೃತಿಗಳು ಹಿಂದಿನ ಕಾಲದ ಮೆರವಣಿಗೆ ಮತ್ತು ದಸರಾದ ಭವ್ಯತೆಯನ್ನು ಬಿಂಬಿಸುತ್ತವೆ. ಗೊಂಬೆತೊಟ್ಟಿಯಲ್ಲಿ ಹಳೆಯ ಸಾಂಪ್ರದಾಯಿಕ ಗೊಂಬೆಗಳಿವೆ. ಆಗ ಅರಸೊತ್ತಿಗೆಯ ಮಂದಿಯನ್ನೊಯ್ಯಲು ಬಳಸುತ್ತಿದ್ದ 84 ಕೆಜಿ ಚಿನ್ನದ ಕುಸುರಿಯಿಂದ ಅಲಂಕರಿಸಿರುವ ಮರದ ಅಂಬಾರಿ ಇಲ್ಲಿದೆ.

ಆಯುಧಶಾಲೆ:

ಅರಮನೆಯಲ್ಲಿರುವ ಬೇರೆಲ್ಲ ಕೋಣೆಯದ್ದು ಒಂದು ತೂಕವಾದರೆ, ಆಯುಧಶಾಲೆಯದ್ದೇ ಒಂದು ತೂಕ. ರಾಜಮನೆತನದವರು ಬಳಸುತ್ತಿದ್ದ ವಿವಿಧ ಬಗೆಯ ಆಯುಧಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. 14ನೆ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಘ್ರನಖ ಮುಂತಾದ ಆಯುಧಗಳ ತಾಳಕ್ಕೆ 20ನೆಯ ಶತಮಾನದ ಪಿಸ್ತೂಲುಗಳು, ಬ೦ದೂಕುಗಳ ಮೇಳವಿದೆ.

ಒಡೆಯರ್ ವ೦ಶದ ಪ್ರಸಿದ್ಧ ಅರಸು ರಣಧೀರ ಕ೦ಠೀರವ ಅವರು ಉಪಯೋಗಿಸಿದ್ದ ಖಡ್ಗಗಳಲ್ಲಿ ಒ೦ದಾದ 'ವಜ್ರಮುಷ್ಠಿ' ಇಲ್ಲಿದೆ. ಮೈಸೂರು ಹುಲಿ ಟಿಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳು ಕೂಡ ಇಲ್ಲಿವೆ.

ಅರಮನೆಯ ಆವರಣದಲ್ಲಿ 12 ದೇವಾಲಯಗಳಿವೆ. ಇವುಗಳಲ್ಲಿ ಸೋಮೇಶ್ವರ ಮತ್ತು ಲಕ್ಷ್ಮೀರಮಣ ದೇವಾಲಯಗಳು ಸುಪ್ರಸಿದ್ಧ. 14ನೆ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಡಿಭೈರವನ ದೇವಾಲಯ ಅತ್ಯಂತ ಪುರಾತನವಾಗಿದೆ.

ಒಟ್ಟಿನಲ್ಲಿ ಮೈಸೂರು ಒಡೆಯರ ಕಾಲದ ಪ್ರಸಿದ್ಧ ಅಂಬಾವಿಲಾಸ ಅರಮನೆ ಅಂದು, ಇಂದಿಗೂ, ಎಂದೆಂದಿಗೂ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಆಕರ್ಷಕ ಕೇಂದ್ರ ಬಿಂದುವಾಗಿದೆ.  


-ಶಿಲ್ಪ.ಡಿ.ಚಕ್ಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com