ದಸರಾ ವಿಜಯನಗರದಿಂದ ಮೈಸೂರಿನಡೆಗೆ...

ಮೈಸೂರು ದಸರ ಎಷ್ಟೊಂದು ಸುಂದರ ಎಲ್ಲೆಲ್ಲೂ ನಗೆಯ ಪನ್ನಿರಾ... ದಸರಾ ವೈಭವವನ್ನು ಸಾರುವಂತಾ ಚಿತ್ರಗೀತೆಯೊಂದಿದೆ ಅದರಲ್ಲಿ ಡಾ. ರಾಜ್ ಕುಮಾರ್ ಅದ್ಬುತವಾಗಿ ದಸರಾ ವೈಭವವನ್ನು ವರ್ಣಿಸುತ್ತಾರೆ...
ಅಂಬಾರಿ
ಅಂಬಾರಿ
Updated on
ಮೈಸೂರು ದಸರ ಎಷ್ಟೊಂದು ಸುಂದರ ಎಲ್ಲೆಲ್ಲೂ ನಗೆಯ ಪನ್ನಿರಾ... ದಸರಾ ವೈಭವವನ್ನು ಸಾರುವಂತಾ ಚಿತ್ರಗೀತೆಯೊಂದಿದೆ ಅದರಲ್ಲಿ ಡಾ. ರಾಜ್ ಕುಮಾರ್ ಅದ್ಬುತವಾಗಿ ದಸರಾ ವೈಭವವನ್ನು ವರ್ಣಿಸುತ್ತಾರೆ. ಇಂತ ಮೈಸೂರು ದಸರ ಕನ್ನಡಿಗರ ನಾಡ ಹಬ್ಬವು ಹೌದು. ಕರ್ನಾಟಕದಲ್ಲಿ ಸಹಸ್ರಾರು ವರ್ಷಗಳಿಂದ ವೈಭವಪೇರಿತವಾಗಿ ದಸರೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಕರ್ನಾಟಕದಲ್ಲಿ ದಸರೆಗೆ ಭವ್ಯ ಇತಿಹಾಸವೂ ಉಂಟು. ಹತ್ತುದಿನಗಳ ದಸರೆಯಲ್ಲಿ ಮಾರ್ನೋಮಿ ಮತ್ತು ವಿಜಯದಶಮಿಗೆ ಮಹತ್ವ. ದೇಶದ ನಾನಾ ಭಾಗಗಳಲ್ಲಿ ನಾನಾ ಪ್ರಕಾರವಾಗಿ ದಸರೆ, ನವರಾತ್ರಿಯ ಆಚರಣೆ ಇದೆಯಾದರೂ, ಮೈಸೂರು ದಸರೆಗೆ ವಿಶೇಷ ಮಹತ್ವ. ಮೈಸೂರು ದಸರೆಗೆ ವಿಶ್ವಖ್ಯಾತಿಯೇ ಇದೆ. ಈ ಖ್ಯಾತಿಗೆ ಮೂಲ ಪ್ರೇರಣೆ ಹಂಪೆಯ ಅರಸರು. ವಾಸ್ತವವಾಗಿ ದಸರೆ ಉತ್ಸವವಾಗಿ ಆಚರಣೆಗೆ ಬಂದಿದ್ದೇ ವಿಜಯನಗರದ ಅರಸರಿಂದ. ಹಂಪಿಯ ಅರಸರು ದಸರೆಯನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು ಎಂಬುದಕ್ಕೆ ಹಲವು ದಾಖಲೆಗಳೂ ಇವೆ. ವಿದೇಶೀ ಪ್ರವಾಸಿಗರೂ ಕೂಡ ವಿಜಯನಗರದ ವಿಜಯದಶಮಿ ಉತ್ಸವದ ವೈಭವ ಕಂಡು ಬೆಕ್ಕಸ ಬೆರಗಾಗಿ, ತಮ್ಮ ಪ್ರವಾಸ ಕಥನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.
ಅಬ್ದುಲ್ ರಜಾಕ್, ನ್ಯೂನಿಜ್, ಪೆಯಸ್ ಮೊದಲಾದ ವಿದೇಶೀ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ವಿಜಯನಗರ ದಸರಾ ಉತ್ಸವದ ವಿವರಗಳಿವೆ. ವರ್ಷಋತು ಅರ್ಥಾತ್ ಮಳೆಗಾಲ ಕಳೆದ ಬಳಿಕ ಬರುವ ಶರದೃತುವಿನಲ್ಲಿ ಮಳೆಯಲ್ಲಿ ಭೂಮಿ ಒಣಗಿ ಗಟ್ಟಿಯಾಗಿರುತ್ತದೆ. ಇದು ಸೈನ್ಯ ಜಮಾವಣೆಗೆ ಉತ್ತಮ ಸಮಯವಾಗಿತ್ತು. ಹೀಗಾಗೇ ಅರಸರು ಆರಂಭಿಸಿದ ನವರಾತ್ರಿಯ ಉತ್ಸವಕ್ಕೆ ಎಲ್ಲ ಮಾಂಡಲಿಕರೂ, ಸಾಮಂತರು ತಮ್ಮ ಸೈನ್ಯದೊಂದಿಗೆ ರಾಜಧಾನಿಗೆ ಆಗಮಿಸಿ, ವಿವಿಧ ಶಕ್ತಿ ಪ್ರದರ್ಶನ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ತಮ್ಮ ದಳದ ಶಕ್ತಿ ಸಾಮರ್ಥ್ಯವನ್ನು ಜನರೆದುರು ಪ್ರದರ್ಶಿಸಿ, ತಮ್ಮ ಸೈನ್ಯದ ಬಲ ಪರಾಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದರು. ನವರಾತ್ರಿ ಪೂಜೆಯ ಬಳಿಕ ವಿಜಯನಗರದ ಅರಸರ ದಂಡಿನೊಂದಿಗೆ ಜೈತ್ರಯಾತ್ರೆ ಹೊರಡುತ್ತಿದ್ದರು.
ಈ ಶಕ್ತಿ ಪ್ರದರ್ಶನ, ಉತ್ಸವದ ವೀಕ್ಷಣೆಗಾಗಿಯೇ ಹಂಪಿಯಲ್ಲಿ ಮಹಾನವಮಿ ದಿಬ್ಬದ ನಿರ್ಮಾಣವಾಯಿತು. ಈ ದಿಬ್ಬದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾಗುತ್ತಿದ್ದ ರಾಯರು, ನೃತ್ಯ, ಸಂಗೀತ, ಆಟಪಾಠ, ಕತ್ತಿವರಸೆ, ಮಲ್ಲಯುದ್ಧ, ಕವಾಯತು ವೀಕ್ಷಿಸುತ್ತಿದ್ದರು. ಪ್ರತಿಭಾವಂತರನ್ನು ಸತ್ಕರಿಸುತ್ತಿದ್ದರು. ಪ್ರತಿನಿತ್ಯ 36 ಸುಂದರಿಯರು ಚಿನ್ನದ ಕಳಶ ಪೂಜೆ ಮಾಡುವ ಮೂಲಕ ದಿನದ ಕಲಾಪಕ್ಕೆ ಮಂಗಳ ಹಾಡುತ್ತಿದ್ದರು. ನವಮಿಯ ದಿನ ಈ ದಿಬ್ಬದಲ್ಲಿ ನಿಂತು ರಾಯರು, ತಮ್ಮ ಎಲ್ಲ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ವಿಜಯನಗರದರಸರ ಈ ವಿಶಿಷ್ಟ ಸಂಪ್ರದಾಯವನ್ನು ಮೈಸೂರು ಒಡೆಯರೂ ಪಾಲಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಮೈಸೂರಿನಲ್ಲಿ ದಸರಾ ಉತ್ಸವ ಆಚರಣೆಗೆ ಬಂದಿತ್ತು ಎಂಬುದಕ್ಕೆ ಸಾಕ್ಷ್ಯಗಳಿವೆ.
ದಸರೆಯ ಕಾಲದಲ್ಲಿ ಮೈಸೂರಿನಲ್ಲಿ ಕೂಡ ಒಡೆಯರು ಮಯೂರ ಸಿಂಹಾಸನಾರೂಢರಾಗಿ ಸಂಗೀತ, ನೃತ್ಯ, ಕವಾಯಿತು ವೀಕ್ಷಿಸುತ್ತಿದ್ದರು. ಇಂದೂ ಸರಕಾರಿ ಪ್ರಾಯೋಜಕತ್ವದಲ್ಲಿ ದಸರಾ ಕ್ರೀಡಾಕೂಟ ಹಾಗೂ ಸಂಗೀತೋತ್ಸವ ಅರಣನೆಯಲ್ಲಿ ನಡೆಯುತ್ತದೆ. ಮೈಸೂರು ದಸರೆಗೆ ಮೆರಗು ಬಂದಿದ್ದು ಜಂಬೂಸವಾರಿಯಿಂದ. ಆಕರ್ಷಕ ಪಥಸಂಚಲನ, ಅರಮನೆಯ ಅಷ್ಟವೈಭವವನ್ನೂ ಒಮ್ಮೆಲೆ ಕಣ್ಣಾರೆ ಕಾಣುವ ಸದವಕಾಶ ದೊರಕುತ್ತಿದ್ದುದೇ ಈ ಕಾಲದಲ್ಲಿ ಹೀಗಾಗಿ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಪ್ರವಾಸಿಗರು ಈ ಉತ್ಸವಕ್ಕೆ ಬರಲು ಆರಂಭಿಸಿದರು.
ಇಂದೂ ಮೈಸೂರಿನಲ್ಲಿ ಜಂಬೂ ಸವಾರಿ ಸಾಗುತ್ತದೆ. ಮೈಸೂರು ರಾಜರು ಬಳಸುತ್ತಿದ್ದ ಸಾರೋಟುಗಳು, ಎತ್ತಿನಗಾಡಿ, ಪಲ್ಲಕ್ಕಿಗಳು, ಕುದುರೆಗಾಡಿ, ಆನೆಗಾಡಿಗಳು ಜಂಬೂಸವಾರಿಯಲ್ಲಿ ಸಾಲಾಗಿ ಸಾಗುತ್ತವೆ. ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ದಚಿತ್ರಗಳ ಮೆರವಣಿಗೆಯೂ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ, ನಂದಿಧ್ವಜ, ತಾಳಮದ್ದಳೆ, ಕೀಲುಕುದುರೆ, ಹುಲಿವೇಷವೇ ಮೊದಲಾದ ಜಾನಪದ ತಂಡಗಳೂ ಪಾಲ್ಗೊಳ್ಳುತ್ತವೆ. ಸಂಜೆ ನಡೆಯುವ ಪಂಜಿನ ಮೆರವಣಿಗೆ ನಯನ ಮನೋಹರ.
ಮೈಸೂರು ನಗರದ ನರೇಂದ್ರಮಾರ್ಗಗಳಲ್ಲಿ (ರಾಜಬೀದಿ) ಸಂಚರಿಸುವ ಈ ಜಂಬೂಸವಾರಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಹಿಂದೆ ಅಂಬಾರಿಯಲ್ಲಿ ಬನ್ನಿ ಮಂಟಪಕ್ಕೆ ಬಂದ ಬಳಿಕ ಮಹಾರಾಜರು, ಆನೆಯಿಂದಿಳಿದು, ಕುದುರೆಯ ಮೇಲೆ ಕುಳಿತು ಸೈನ್ಯದ ಪರಿವೀಕ್ಷಣೆ ಮಾಡುತ್ತಿದ್ದರು. ಯುದ್ಧ ಕಾಲದಲ್ಲಿ ವೀರಾವೇಶದಿಂದ ಹೋರಾಡಿದ ಸೇನಾನಿಗಳಿಗೆ, ಶೂರ ಸೈನಿಕರಿಗೆ ಸ್ವತಃ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು.
ಇಂದು ಮಹಾರಾಜರ ವಂಶಸ್ಥರು ಅಂಬಾರಿಯಲ್ಲಿ ಕೂರುವುದಿಲ್ಲ. ಬದಲಾಗಿ ಮೈಸೂರು ಒಡೆಯರ ಕುಲದೇವತೆ ಚಾಮುಂಡೇಶ್ವರಿಯ ಪುತ್ಥಳಿಯನ್ನು ಅಂಬಾರಿಯಲ್ಲಿ ಕೂರಿಸಲಾಗುತ್ತದೆ. ಸಂಪ್ರದಾಯಬದ್ಧವಾಗಿಯೇ ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಬನ್ನಿ ಮಂಟಪದಲ್ಲಿ ಬನ್ನಿ ವಿತರಣೆಯೊಂದಿಗೆ, ಪಟಾಕಿ ಪ್ರದರ್ಶನದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ. ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲದಲ್ಲೂ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ಅಂಗಡಿ, ಮುಂಗಟ್ಟುಗಳು ವಿದ್ಯುತ್ ದೀಪದಿಂದ ಝಗಮಗಿಸುತ್ತವೆ. ದಸರೆ ಕಾಲದಲ್ಲಿ ಮೈಸೂರಿನ ಸೊಬಗು ಕಾಣುವುದೇ ಒಂದು ಸೊಗಸು. ಅದೊಂದು ಇಂದ್ರನ ಅಮರಾವತಿಯಂತಿರುತ್ತದೆ.
400 ವರ್ಷಗಳ ದಸರಾ ಇತಿಹಾಸ
ಪ್ರಸ್ತುತ 405ನೇ ದಸರಾ ಉತ್ಸವಕ್ಕೆ ಮೈಸೂರು ಸಜ್ಜಾಗಿದೆ. ಇಂದಿನ ಮೈಸೂರು ‘ಮಹಿಷೂರು’ ಆಗಿದ್ದಾಗ ಹದಿನಾಡು ಗ್ರಾಮದಿಂದ ಬಂದ ಅರಸು ಜನಾಂಗದ ಮನೆತನವೊಂದು ಇತ್ತು. ದೂರದಿಂದ ಬಂದ ಯದುರಾಯನಿಗೆ ಸದ್ಗುಣ ಸಂರಕ್ಷಕನೆಂದು ತಿಳಿದು ಇದೇ ಕುಟುಂಬ ನಂಟು ಬೆಳೆಸಿತು. ಆಗ ಯದುರಾಯ ಈ ಸಣ್ಣ ಊರೊಂದರ ನೇತೃತ್ವ ವಹಿಸಿದ. ರಾಜನೆಂದು ಕರೆದರು. ಮುಂದಿನ ಉತ್ತರಾಧಿಕಾರಿಗಳಿಗೆಲ್ಲ ಹೆಸರಿನ ಮುಂದೆ ‘ಒಡೆಯರ್’ ಎಂದು ಸೇರಿಸಿಕೊಂಡು, ಕದಂಬ, ಗಂಗ, ಚಾಲುಕ್ಯರಂತೆ ಈ ಮನೆತನವೂ ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಈ ಒಡೆಯರ್ ಎಂಬ ರಾಜಮನೆತನದಲ್ಲಿ ಪ್ರಜಾಪ್ರಭುತ್ವ ಬರುವವರೆಗೆ ‘ರಾಜತ್ವ’ ನೀಡಿದವರು 25 ಮಂದಿ. ಈ ಪೈಕಿ ಯದುರಾಯ, ಒಬ್ಬ ರಣಧೀರ ಕಂಠೀರವ, ಇನ್ನೊಬ್ಬ ತಿಮ್ಮರಾಜ, ಮತ್ತಿಬ್ಬರು ರಾಜ ಒಡೆಯರ್, ಹತ್ತು ಮಂದಿ ಚಾಮರಾಜರು, ನಾಲ್ವರು ಕೃಷ್ಣರಾಜರು, ಕೊನೆಯದಾಗಿ ಜಯಚಾಮರಾಜೇಂದ್ರ ಆಗಿ ಹೋದವರು.
ಈ ಒಡೆಯರ ಹೆಸರಿನ ರಾಜರು ಗಂಡಭೇರುಂಡ ಲಾಂಛನ ಹೊತ್ತು ಎರಡು ಕಡೆ ಆಳ್ವಿಕೆ ನಡೆಸಿದ್ದಾರೆ. ಒಂದು ಮೈಸೂರು ಮತ್ತೊಂದು ಶ್ರೀರಂಗಪಟ್ಟಣ, ಮೊದಲಿಂದ ಐವರು ಮೈಸೂರನ್ನು ಕೇಂದ್ರವಾಗಿರಿಸಿಕೊಂಡರೆ 6 ರಿಂದ 21ರವರೆಗಿನ ರಾಜರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ನಂತರದ ನಾಲ್ವರು ಮತ್ತೆ ಮೈಸೂರಿಗೆ ಸ್ಥಳಾಂತರವಾಗಿ ಅಧಿಕಾರ ನಡೆಸಿದ್ದಾರೆ. ಹಲವರು ಯುದ್ಧ ಮಾಡಿದ್ದರೆ ಮತ್ತೆ ಕೆಲವರು ಇಂಗ್ಲಿಷರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿಯೊಂದಿಗೆ ಅಪ್ಪಿಕೊಂಡು ರಾಜತ್ವ ಸಾಧಿಸಿದವರಿದ್ದಾರೆ. ಈ ಹಿನ್ನೆಲೆಯಲ್ಲಿ ಎಂದೋ ವಿಜಯನಗರದಲ್ಲಿ ನಡೆದಿದ್ದ ಮಹಾನವಮಿ ಆಚರಣೆಯನ್ನು ಪುನರ್ ಜಾರಿಗೊಳಿಸಿ ವೈಭವೀಕರಿಸಬೇಕೆಂದು ರಾಜ ಒಡೆಯರ್ ಇಂದಿಗೆ 400 ವರ್ಷಗಳ ಹಿಂದೆ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಈ ದಸರೆಯ ದಿಬ್ಬಣವನ್ನು ಗೌರಿ ಕಡುವೆ ಎಂಬ ಸ್ಥಳದಲ್ಲಿ ಪುನಾರಂಭಿಸಿದರು.
- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com