ಬಿವಿಸೀ ದಂಪತಿಗೆ 30 ತಿಂಗಳು ಜೈಲು ಶಿಕ್ಷೆ

ಬಿ.ವಿ ಸೀತಾರಾಮ್, ರೋಹಿಣಿ
ಬಿ.ವಿ ಸೀತಾರಾಮ್, ರೋಹಿಣಿ

ಮಂಗಳೂರು: ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಕ್ಷೇತ್ರದ ಆರಾಧ್ಯ ದೈವ ಮಂಜುನಾಥ ಸ್ವಾಮಿ, ಕ್ಷೇತ್ರಕ್ಕೆ ಒಳಪಟ್ಟ ಎಲ್ಲ ಸಂಸ್ಥೆಗಳ ಬಗ್ಗೆ ಮಾನಹಾನಿಕರ ವರದಿಗಳನ್ನು ಪ್ರಕಟಿಸಿದ ಕರಾವಳಿ ಅಲೆ ಪ್ರತಿಕೆಯ ವ್ಯವಸ್ಥಾಪಕ ಸಂಪಾದಕ ಬಿ.ವಿ ಸೀತಾರಾಮ್, ಮಾಲಕಿ ರೋಹಿಣಿ ಮತ್ತು ಸಂಪಾದಕ ಬಿ.ಎಸ್ ಶಿವಪ್ರಸಾದ್ ಇವರಿಗೆ ಒಟ್ಟು 5 ಪ್ರಕರಣಗಳಲ್ಲಿ ಶಿಕ್ಷೆ ನೀಡಿ ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯ ಆದೇಶಿಸಿದೆ.

ಎಲ್ಲ 5 ಪ್ರಕರಣಗಳಲ್ಲಿಯೂ ಆರೋಪಿಗಳಿಗೆ ತಲಾ 6 ತಿಂಗಳಂತೆ ಒಟ್ಟು 30 ತಿಂಗಳು ಸಜೆ ಮತ್ತು ಪ್ರತೀ ಪ್ರಕರಣದಲ್ಲಿ ಎಲ್ಲಿರಿಗೂ ತಲಾ ರು. 3 ಸಾವಿರದಂತೆ ಒಟ್ಟು ರು. 15 ಸಾವಿರ ದಂಡ, ತಪ್ಪಿದಲ್ಲಿ ಪ್ರತೀ ಪ್ರಕರಣದಲ್ಲಿ ತಲಾ 1 ತಿಂಗಳಿನಂತೆ ಜೈಲು ಶಿಕ್ಷೆ ನೀಡಲಾಗಿದೆ ಎಂದು ನ್ಯಾಯಾಧೀಶರಾದ ಉಂಡಿ ಮಂಜೂಳಾ ಶಿವಪ್ಪ ಆದೇಶಿಸಿದರು.

ಕರಾವಳಿ ಅಲೆ ಸಂಜೆ ಪತ್ರಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಸ್ಥಳ ದೇವಸ್ಥಾನದ ಆರಾಧ್ಯ ದೇವರಾದ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿಯನ್ನು ಹೀಯಾಳಿಸಿ, ದುರುದ್ದೇಶದಿಂದ ಮಾನಹಾನಿಕಾರವಾದ ವಿಷಯಗಳನ್ನು ನಿರಂತರವಾಗಿ ಸಿವಿಲ್ ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಪ್ರಕಟಿಸಿದ್ದಾರೆ. ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರು ಖಾಸಗಿ ದೂರು ಸಲ್ಲಿಸಿದ್ದರು. ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು.

ಸುಳ್ಳೆಂದು ಗೊತ್ತಿದ್ದರೂ ಪ್ರಕಟಿಸಿದ್ದು ಮತ್ತು ಈ ಪತ್ರಿಕೆಯಲ್ಲಿ ಆರೋಪಗಳೇ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಪ್ರಕಟಣೆಗಳನ್ನು ಪ್ರಕಟಿಸಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ವೈಯಕ್ತಿಕವಾಗಿ ತಮಗೂ ಮಾನ ಹಾನಿ ಉಂಟುಮಾಡಿರುತ್ತಾರೆ ಎಂದು ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಬಿ. ವರ್ಧಮಾನ್ ಜೈನ್ ಮತ್ತು ಎಸ್.ಡಿ.ಎಂ ಬಿಸಿನೆಸ್ ಮೆನೇಜ್‌ಮೆಂಟ್ ನಿರ್ದೇಶಕ ಡಾ. ದೇವರಾಜ್ ಮತ್ತು ಆದರ್ಶ ವಿದ್ಯಾಲಯ ಸಂಚಾಲಕ ಬಾಲಕೃಷ್ಣ ಭಂಡಾರಿ ಸಾಕ್ಷ್ಯ ನುಡಿದಿದ್ದರು. ಕ್ಷೇತ್ರದ ಪರವಾಗಿ ವಕೀಲರಾದ ಪಿ.ಪಿ ಹೆಗ್ಡೆ ಮತ್ತು ರಾಜೇಶ್ ಕುಮಾರ್ ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com