ಪಿಸಿ ಹುದ್ದೆಗೆ ಮರುಪರೀಕ್ಷೆ

ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ನೇಮಕ ಪರೀಕ್ಷೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ನೇಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2013ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಾನ್‌ಸ್ಟೇಬಲ್ ನೇಮಕಕ್ಕೆ ನ.16ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಆದರೆ, ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಬಯಲಾಗಿ ಹಲವರು ಲಾಭ ಪಡೆದುಕೊಂಡಿದ್ದರು. ಅಭ್ಯರ್ಥಿಗಳು ಸೇರಿದಂತೆ 14 ಆರೋಪಿಗಳನ್ನು ಕಲಬುರಗಿ ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಮರುಪರೀಕ್ಷೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಪಿಸಿಗೆ ಮರುಪರೀಕ್ಷೆ

ಜನವರಿಯಲ್ಲಿ ಪರೀಕ್ಷೆ: ನೇಮಕ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಮಾತನಾಡಿ, ಸೋರಿಕೆಯಾದ ಪ್ರಶ್ನೆ ಪತ್ರಿಕೆಯಿಂದ 300ಕ್ಕೂ ಅಧಿಕ ಅಭ್ಯರ್ಥಿಗಳು ಲಾಭ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳನ್ನು ಅನರ್ಹಗೊಳಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಉಳಿದಂತೆ ದೈಹಿಕ ಪರೀಕ್ಷೆ ಪೂರ್ಣಗೊಳಿಸಿ ಲಿಖಿತ ಪರೀಕ್ಷೆಗೆ ಅರ್ಹರಾದ ಎಲ್ಲರಿಗೂ ಮತ್ತೊಮ್ಮೆ ಕಾಲ್ ಲೆಟರ್ ಕಳುಹಿಸಿ ಮರುಪರೀಕ್ಷೆ ನಡೆಸಲಾಗುತ್ತದೆ. ಜನವರಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದರು.

ಎಲ್ಲರಿಗೂ ಕಾಲ್ ಲೆಟರ್

6609 ಸಿವಿಲ್ ಮತ್ತು ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು 4,16,258 ಮಂದಿ ಅರ್ಜಿ ಹಾಕಿದ್ದರು. ಈ ಪೈಕಿ 1,18,504 ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹರಾಗಿದ್ದರು. ನಂತರ ರಾಜ್ಯದ 175 ಕೇಂದ್ರಗಳಲ್ಲಿ 83,166 ಮಂದಿ ಲಿಖಿತ ಪರಿಕ್ಷೆ ಬರೆದಿದ್ದರು. ಲಿಖಿತ ಪರೀಕ್ಷೆಗೆ ಆಯ್ಕೆಯಾದ ಎಲ್ಲರಿಗೂ ಕಾಲ್ ಲೆಟರ್ ಸಿಗಲಿದೆ ಎಂದು ನೇಮಕ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆ ಸಿಬ್ಬಂದಿ ಕೈವಾಡ?
ಪತ್ರಿಕೆ ಯಾವ ಖಜಾನೆಯಿಂದ, ಯಾವ ಭಾಗದಿಂದ ಸೋರಿಕೆಯಾಗಿದೆ ಎನ್ನುವ ಮಾಹಿತಿ ಇಲ್ಲ. ಹೀಗಾಗಿ ಪ್ರಕರಣದ ಪ್ರಮುಖ ಆರೋಪಿ ಪೊಲೀಸರಿಗೆ ಸಿಕ್ಕಿಲ್ಲ. ಆತನ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೈವಾಡವಿರುವ ಶಂಕೆ ಇದೆ. ಈ ಸಂಬಂಧ ಈಶಾನ್ಯ ವಿಭಾಗ ಐಜಿಪಿ ಡಾ.ಕೆ.ಸುರೇಶ್ ಮಹಮ್ಮದ್ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ ಎಂದು ಮೇಘರಿಕ್ ತಿಳಿಸಿದರು.

3 ವರ್ಷ ಅನರ್ಹ

ಇದುವರೆಗಿನ ತನಿಖೆಯಲ್ಲಿ 300 ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯ ಲಾಭ ಪಡೆದುಕೊಂಡಿರುವುದು ಖಚಿತವಾಗಿದೆ. ಅರ್ಜಿ ಹಾಕಿದ ಪ್ರತಿ ಅಭ್ಯರ್ಥಿಯ ಮೊಬೈಲ್ ಫೋನ್ ಸಂಖ್ಯೆ ತೆಗೆದುಕೊಂಡಿರುವುದರಿಂದ ಅಕ್ರಮದಲ್ಲಿ ಭಾಗಿಯಾದವರ ಬಗ್ಗೆ ಬಹುತೇಕ ಮಾಹಿತಿ ಇದೆ. ಅಂಥ ಅಭ್ಯರ್ಥಿಗಳನ್ನು ಮುಂದಿನ 3 ವರ್ಷ ಇಲಾಖೆಯ ಎಲ್ಲ ಪರೀಕ್ಷೆ ಬರೆಯುವುದರಿಂದ ಅನರ್ಹಗೊಳಿಸಲಾಗುತ್ತದೆ. ಅಕ್ರಮದಲ್ಲಿ ಭಾಗಿಯಾಗಿರುವವರ ಜತೆ ಮೊಬೈಲ್‌ನಲ್ಲಿ ಮಾತನಾಡಿದವರನ್ನು, ಅನರ್ಹಗೊಳಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಿನ್ನೆಲೆಯಲ್ಲಿ ನ.16 ರಂದು ನಡೆದ ಪರೀಕ್ಷೆಯನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು ದಿನಾಂಕವನ್ನು ಕರ್ನಾಟಕ ಪೊಲೀಸ್ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು.

ಎನ್.ಎಸ್.ಮೇಘರಿಕ್, ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕ, ನೇಮಕ ಮತ್ತು ತರಬೇತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com