
ಬೆಂಗಳೂರು: ಬಡವರಿಗೆ ಆರೋಗ್ಯ ಸೇವೆ ಎನ್ನುವುದು ಗಗನ ಕುಸುಮ ಆಗಬಾರದು ಎಂಬ ಕಾರಣದಿಂದ ದಂತ ಭಾಗ್ಯ ಹಾಗೂ ಡಯಾಲಿಸಿಸ್ ಘಟಕವನ್ನು ಸರ್ಕಾರವೇ ಆರಂಭಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬಡವರಿಗೆ ಕಿಡ್ನಿ ಸಂಬಂಧಿಸಿದ ರೋಗಗಳು ಬಂದರೆ ಜೀವನ ಸರ್ವನಾಶವಾಗುತ್ತದೆ. ಇನ್ನು ದಂತಪಕ್ತಿಯಿಲ್ಲದ ಬಡವರಿಗೆ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇಂಥ ಸೂಕ್ಷ್ಮಗಳನ್ನು ಗಮನಿಸಿ ರಾಜ್ಯ ಸರ್ಕಾರ ಇವೆರಡು ಯೋಜನೆಗಳನ್ನು ಆರಂಭಿಸಿದೆ ಎಂದು ದಂತ ಭಾಗ್ಯ ಯೋಜನೆ ಹಾಗೂ ಡಯಾಲಿಸಿಸ್ ಘಟಕಕ್ಕೆ ಚಾಲನೆ ನೀಡಿ ಹೇಳಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ 45 ಆಸ್ಪತ್ರೆಗಳಲ್ಲಿ ದಂತಭಾಗ್ಯ ಯೋಜನೆ ಚಾಲ್ತಿಯಲ್ಲಿರುತ್ತದೆ. ಸುಮಾರು 32 ಸಾವಿರ ಬಡವರಿಗೆ ದಂತಪಕ್ತಿ ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಯೋಜನೆಯ ಯಶಸ್ಸಿಗಾಗಿ ಫಲಾನುಭವಿಗಳನ್ನು ಕರೆತರುವ ಆಶಾ ಕಾರ್ಯಕರ್ತಪಿಗೆ ರು.100 ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ, ಭವಿಷ್ಯದಲ್ಲಿ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು. ಜತೆಗೆ ಸರ್ಕಾರಿ ದಂತವೈದ್ಯ ಆಸ್ಪತ್ರೆ ಆರಂಭಿಸುವ ಬಗೆಗೂ ಚಿಂತಿಸಲಾಗುವುದು ಎಂದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಕಷ್ಟಗಳ ನಾನಾ ಮುಖ ಕಾಣಲು ಆರಂಭವಾಯಿತು. ಚಿಕಿತ್ಸಾ ವೆಚ್ಚ ಕೋರಿ ಸಾಕಷ್ಟು ಅರ್ಜಿಗಳು ಬರಲು ಆರಂಭಿಸಿದವು, ಇದರಲ್ಲಿ ಹೆಚ್ಚಿನ ಅರ್ಜಿಗಳು ಡಯಾಲಿಸಿಸ್ಗೆ ಸಂಬಂಧಿಸಿದ್ದಾಗಿತ್ತು. ಕೇವಲ ಡಯಾಲಿಸಿಸ್ ಗಾಗಿ ಪ್ರತಿ ತಿಂಗಳು ರು.10 ರಿಂದ 14 ಸಾವಿರ ಭರಿಸಲು ಬಡವರಿಗೆ ಸಾಧ್ಯವಿಲ್ಲ. ಇದೇ ಕಾರಣದಿಂದ ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಡಯಾಲಿಸಿಸ್ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಈಗ ಆರಂಭವಾಗಿರುವ 30 ತಾಲೂಕು ಹೊರತು ಪಡಿಸಿ ಆಯಾ ಜಿಲ್ಲೆಯ ಮತ್ತೊಂದು ತಾಲೂಕು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ದಂತಪಂಕ್ತಿ ಖರೀದಿಸಲು ಬಡವರಿಗೆ ಸರ್ಕಾರ ಅನುವಾಗಲಿದೆ. ಆ ಮೂಲಕ ಬಡವರ ಮುಖದಲ್ಲಿ ಮತ್ತೆ ನಗು ಬರುವಂತೆ ಮಾಡುವುದು ಸರ್ಕಾರದ ಉದ್ದೇಶ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಹೇಳಿದರು.
Advertisement