
ಚಿಕ್ಕಮಗಳೂರು: ದಶಕಕ್ಕೂ ಹೆಚ್ಚು ಕಾಲ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇಬ್ಬರು ನಕ್ಸಲರು ಸೋಮವಾರ ಜಿಲ್ಲಾಡಳಿತದ ಎದುರು ಶರಣಾದರು.
ಸಿರಿಮನೆ ನಾಗರಾಜ್, ನೂರ್ ಜುಲ್ಫಿಕರ್ ಶರಣಾದವರು. ಇವರಿಬ್ಬರೂ 2002ರ ನಂತರ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಅವರ ವಿರುದ್ಧ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಾನಾ ಪ್ರಕರಣಗಳು ದಾಖಲಾಗಿದ್ದು, ತಲೆ ಮರೆಸಿಕೊಂಡಿದ್ದರು.
ಬೆಳಗ್ಗೆ 11.30ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆ ಸ್ವಾಮಿ ಹಾಗೂ ಗೌರಿ ಲಂಕೇಶ್ ಅವರು ಜಿಲ್ಲಾಧಿಕಾರಿ ಶೇಖರಪ್ಪ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಶರಣಾಗತಿ ಸಂಬಂಧ ಮಾತುಕತೆ ನಡೆಸಿದರು. ಮಧ್ಯಾಹ್ನ 2.28ರ ವೇಳೆಗೆ ನಕ್ಸಲ್ ನಾಯಕರಿಬ್ಬರೂ ಪ್ರವಾಸಿ ಮಂದಿರದ ಮುಂಭಾಗಕ್ಕೆ ಬಂದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎದುರು ಹಾಜರಾದರು. ಅಲ್ಲಿ ಇಬ್ಬರಿಂದಲೂ ಹೇಳಿಕೆ ಪಡೆದು ಲಿಖಿತವಾಗಿ ದಾಖಲಿಸಿಕೊಳ್ಳಲಾಯಿತು. ಈ ಪ್ರಕ್ರಿಯೆ ಮುಗಿದ ನಂತರ ಸಿರಿಮನೆ ನಾಗರಾಜ್, ನೂರ್ ಜುಲ್ಫಿಕರ್ ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಲು ಅವಕಾಶ ಕಲ್ಪಿಸಿದ ಸಮಿತಿ ಸದಸ್ಯರ ಎದುರು ಹಾಜರಾದರು
ಸಿರಿಮನೆ ನಾಗರಾಜ ಹಾಗೂ ನೂರ್ ಜುಲ್ಫೀಕರ್ ಅವರನ್ನು ಸೋಮವಾರ ಸಂಜೆ 8.30ಕ್ಕೆ ಶೃಂಗೇರಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಮಂಗಳವಾರ ಇವರನ್ನು ಕೊಪ್ಪ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
Advertisement