ನಂದಿತಾಳದ್ದು ಆತ್ಮಹತ್ಯೆ: ಸಿಐಡಿ ಮಧ್ಯಂತರ ವರದಿ

ಅತ್ಯಾಚಾರ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳೂ ಲಭ್ಯವಾಗಿಲ್ಲ...
ನಂದಿತಾ
ನಂದಿತಾ

ಬೆಂಗಳೂರು: ತೀರ್ಥಹಳ್ಳಿಯ ನಂದಿತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ತನಿಖೆಯ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಾಚಾರ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳೂ ಲಭ್ಯವಾಗಿಲ್ಲ. ವಿಷ ಸೇವನೆ ಖಚಿತವಾಗಿದ್ದು, ಬಾಲಕಿಯ ದೇಹದಲ್ಲಿ ವಿಷಕಾರಿ ಫಾಸ್ಪರಸ್ ಅಂಶ ಕಂಡು ಬಂದಿದೆ. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಸಿಐಡಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

233 ಪುಟಗಳ ವರದಿ ಸಲ್ಲಿಕೆಯಾಗಿದ್ದು ನಿರ್ಧಿಷ್ಟವಾಗಿ ಇಂಥದ್ದೇ ವಿಷವೆಂದು ತಿಳಿದು ಬಂದಿಲ್ಲ. ಹೀಗಾಗಿ ಬಾಲಕಿ ಆರೋಗ್ಯ ಹಂತ ಹಂತವಾಗಿ ಹದಗೆಡುತ್ತಾ ಹೋಗಿತ್ತು. ಕೊನೆಗೆ ಹೃದಯಾಘಾತ, ಅಂಗಾಂಗ ವೈಫಲ್ಯದಿಂದ ಮೃಪಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 31 ರಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ನಂದಿತಾ ಕೊನೆಯುಸಿರೆಳೆದಿದ್ದಳು.

ರಾಜಕೀಯ ಕೆಸರೆರಚಾಟ, ಗಲಭೆ, ಪ್ರತಿಭಟನೆ, ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಕಾರಣವಾಗಿದ್ದ ನಂದಿತಾ ಸಾವು ಪ್ರಕರಣದ ತನಿಖೆ ಸಿಐಡಿ ವದಿಯೊಂದಿಗೆ ಬಹುತೇಕ ಅಂತ್ಯಗೊಂಡಿವೆ.

ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಹಾಗೂ ಇದೊಂದು ಆತ್ಮಹತ್ಯೆ ಎನ್ನುವುದು ಸ್ಪಷ್ಟವಾಗಿದೆ. ಆರಂಭದಿಂದಲೂ ಇದು ಆತ್ಮಹತ್ಯೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಲೆ ಬಂದಿದ್ದರು.

ಆದರೆ, ಮಲೆನಾಡು ಪ್ರದೇಶದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆದ ಕೃತ್ಯ ಎಂದೇ ಬಿಂಬಿಸುವ ಮೂಲಕ ಪ್ರಕರಣಕ್ಕೆ ಇಲ್ಲದ ತಿರುವುಗಳನ್ನು ನೀಡಲಾಗಿತ್ತು. ಹೀಗಾಗಿಯೇ ಪ್ರಕರಣ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಒಂದು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ಸಿಐಡಿ ತಂಡ ವರದಿ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com