ಒಡೆಯರ್ ನಿಧನಕ್ಕೆ ವರ್ಷ: ಬಗೆಹರಿಯದ ಉತ್ತರಾಧಿಕಾರಿ ವಿವಾದ

ಯದುವಂಶದ ಸಂಪ್ರದಾಯದಂತೆ ದಸರೆ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸಲಾಗುತ್ತದೆ...
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್

ಮೈಸೂರು: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿಧನರಾಗಿ ಬುಧವಾರಕ್ಕೆ(ಡಿ.10) ಒಂದು ವರ್ಷ. ಆದರೆ ಉತ್ತರಾಧಿಕಾರಿ ಯಾರೆಂಬ ವಿವಾದ ಮಾತ್ರ ಇನ್ನೂ ಬಗೆಹರಿದಿಲ್ಲ.

ಅಂಬಾವಿಲಾಸ ಅರಮನೆಯಲ್ಲಿ ಒಡೆಯರ್ ಅವರ ಪ್ರಥಮ ವಾರ್ಷಿಕ ಪುಣ್ಯಸ್ಮರಣೆಯನ್ನು ರಾಜವಂಶಸ್ಥರು ಕಳೆದ ವಾರವೇ ಧಾರ್ಮಿಕ ವಿಧಿವಿಧಾನಗಳಂತೆ ನಡೆಸಿದ್ದಾರೆ. ಸಮಾಧಿಯ ಸ್ಥಳವನ್ನು ಕೂಡ ಪ್ರಮೋದಾದೇವಿ ಒಡೆಯರ್ ಅವರು ಅಭಿವೃದ್ಧಿಪಡಿಸಿದ್ದಾರೆ. ಅರಸು ಸಂಘಟನೆ, ಜಿಲ್ಲಾ ಕಸಾಪ ಮತ್ತಿತರ ಸಂಘಟನೆಗಳು ಡಿ.10ರಂದು ಒಡೆಯರ್ ಪುಣ್ಯ ಸ್ಮರಣೆ ಕಾರ್ಯಕ್ರಮ ಏರ್ಪಡಿಸಿವೆ.

ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮುಗಿದಿದ್ದರೂ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಹಲವಾರು ವರ್ಷಗಳಿಂದಲೂ ಮೈಸೂರು ರಾಜವಂಶಸ್ಥರಲ್ಲಿ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಉದ್ಭವವಾಗಿರಲಿಲ್ಲ.

ರಾಜರಾಗಿ ಮಕ್ಕಳಿಲ್ಲದಿದ್ದರು ಅವರ ಸಹೋದರರ ಪುತ್ರರನ್ನು ದತ್ತು ಪಡೆಯಲಾಗುತ್ತಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಕ್ಕಳಿರಲಿಲ್ಲ. ಅವರು ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರ ಜಯ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡಿದ್ದರು.

ಜಯಚಾಮರಾಜ ಒಡೆಯರ್ ನಿಧನದ ನಂತರ ಅವರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಉತ್ತರಾಧಿಕಾರಿಯಾಗಿದ್ದರು. 1974ರಿಂದಲೂ 2013ರವರೆಗೆ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುತ್ತಾ ರಾಜರ ಕಾಲದ ಗತವೈಭವವನ್ನು ಜೀವಂತವಾಗಿರಿಸಿದ್ದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್-ಪ್ರಮೋದಾದೇವಿ ಅವರಿಗೆ ಮಕ್ಕಳಿರಲಿಲ್ಲ. ಅವರು ಯಾರನ್ನೂ ದತ್ತು ಸ್ವೀಕರಿಸಿರಲಿಲ್ಲ. ಹೀಗಾಗಿ ಉತ್ತರಾಧಿಕಾರಿ ಯಾರೆಂಬ ಕುತೂಹಲ ಸಜವಾಗಿದೆ. ಒಡೆಯರ್ ಅವರು ಕಳೆದ ವರ್ಷ ಡಿ.10ರಂದು ಹಠಾತ್ ನಿಧನರಾದರು. ಇಡೀ ಮೈಸೂರು ನಗರವೇ ಶೋಕಸಾಗರದಲ್ಲಿ ಮುಳುಗಿತ್ತು.

ಹಳೆಯ ಮೈಸೂರು ಸಂಸ್ಥಾನದಲ್ಲಿ ರಾಜವಂಶಸ್ಥರ ಗುಣಗಾನ ನಡೆಯಿತು. ಡಿ.11ರಂದು ನಡೆದ ಅಂತಿಮಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದರು. ಜಯಚಾಮರಾಜ ಒಡೆಯರ್ ಅವರ ಅಂತಿಮಯಾತ್ರೆಯ ನಂತರ ಮತ್ತೊಂದು ಅಂಥದ್ದೆ ಯಾತ್ರೆ ಅಂದು ನಡೆದಿತ್ತು.

ಒಡೆಯರ್ ನಿಧನರಾದಾಗ ರಾಜವಂಶಸ್ಥರು ತರಾತುರಿಯಲ್ಲಿ ಉತ್ತರಾಧಿಕಾರಿ ಆಯ್ಕೆಗೆ ಮುಂದಾಗಲಿಲ್ಲ. ಪ್ರಮೋದಾದೇವಿ ಒಡೆಯರ್ ಅವರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ, ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿದೇವಿ ಅವರ ಪುತ್ರ ಚದುರಂಗ ಕಾಂತರಾಜೇ ಅರಸ್ ಅವರ ಮೂಲಕ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದರು.

ಕಾಂತರಾಜೇ ಅರಸ್ ಅವರು ಒಡೆಯರ್ ಅವರ ಪಾರ್ಥಿವ ಶರೀರಕ್ಕೆ, ವೈಕುಂಠ ಸಮಾರಾಧನೆ ಮೊದಲಾದ ವಿಧಿವಿಧಾನಗಳನ್ನು ನೆರವೇರಿಸಿದ್ದರು.

ದಸರೆಯಲ್ಲೂ ಆಗಲಿಲ್ಲ: ಯದುವಂಶದ ಸಂಪ್ರದಾಯದಂತೆ ದಸರೆ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸಲಾಗುತ್ತದೆ. ಹೀಗಾಗಿ ದಸರೆಯ ವೇಳೆಗಾದರೂ ಉತ್ತರಾಧಿಕಾರಿ ಆಯ್ಕೆಯಾಗಬೇಕಿತ್ತು. ಆದರೆ ಬೆಂಗಳೂರು-ಮೈಸೂರು ಅರಮನೆಗಳ ವಿವಾದ ಮುಂದಿಟ್ಟುಕೊಂಡು, ರಾಜ್ಯ ಸರ್ಕಾರದಿಂದ ಸೂಕ್ತ ರೀತಿಯ ಪರಿಹಾರ ಬಯಸಿ, ಪ್ರಮೋದಾದೇವಿ ಅವರು ಉತ್ತರಾಧಿಕಾರಿ ಆಯ್ಕೆಯನ್ನೇ ಮುಂದೂಡಿದರು.

-ಅಂಶಿ ಪ್ರಸನ್ನಕುಮಾರ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com