ಆಸ್ಪತ್ರೆಯಲ್ಲಿ ಮಗು ಬದಲು ಆರೋಪ
ಆಸ್ಪತ್ರೆಯಲ್ಲಿ ಮಗು ಬದಲು ಆರೋಪ

ಆಸ್ಪತ್ರೆಯಲ್ಲಿ ಮಗು ಬದಲು?

ಒಂದು ಗಂಡು ಮಗು, ಒಂದು ಹೆಣ್ಣು ಮಗುವಾಗಿದೆ. ಅದರಲ್ಲಿ ಗಂಡು ಮಗು ತೀರಿಕೊಂಡಿದೆ...

ಬೆಂಗಳೂರು: ಹೆರಿಗೆಯಾದ ತಕ್ಷಣ ಅವಳಿ ಗಂಡು ಮಗು ಹುಟ್ಟಿವೆ ಎಂದು ಹೇಳಿದ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಗಂಡಲ್ಲ ಹೆಣ್ಣು ಮಗು ಎಂದು ಹೇಳಿ ಬಾಣಂತಿಯನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆ ಠಾಣೆಯಲ್ಲಿ ಐಪಿಸಿ ಕಲಂ 420 ಅನ್ವಯ ಪ್ರಕರಣ ದಾಖಲಾಗಿದೆ.

ಚಾಮರಾಜಪೇಟೆ ವೆಂಕಟರಾಮನಗರ ನಿವಾಸಿ ಮಲ್ಲೇಶ್ ಎಂಬವರ ಪತ್ನಿ ಸುಧಾಗೆ ಗುರುವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಧ್ಯಾಹ್ನ 2.30ಕ್ಕೆ ವಾಣಿವಿಲಾಸ್ ಆಸ್ಪತ್ರೆಗೆ ಸೇರಿಸಿದ್ದರು.

ಪರೀಕ್ಷೆ ನಡೆಸಿದಾಗ ಕೂಡಲೇ ಆಪರೇಷನ್ ಮಾಡಿ ಹೆರಿಗೆ ಮಾಡಿಸಬೇಕು ಎಂದಿದ್ದರು. 4 ಗಂಟೆ ವೇಳೆಗೆ ಕೋಣೆಯಿಂದ ಹೊರ ಬಂದ ಮಹಿಳಾ ಸಿಬ್ಬಂದಿ ಅವಳಿ ಗಂಡು ಮಗುವಾಗಿವೆ ಎಂದರು, ಒಂದು ಮಗು ಮೃತಪಟ್ಟಿದೆ ಎಂದಿದ್ದರು. ಬದುಕಿರುವ ಮಗುವನ್ನು ತರಲು ಒಳ ಹೋಗಿದ್ದರು.

ಅದಾದ ಸ್ವಲ್ಪ ಹೊತ್ತಿನ ನಂತರ ಬೇರೊಬ್ಬ ಮಹಿಳೆ ಬಂದಿದ್ದು, ನಿಮಗೆ ಒಂದು ಗಂಡು ಮಗು, ಒಂದು ಹೆಣ್ಣು ಮಗುವಾಗಿದೆ. ಅದರಲ್ಲಿ ಗಂಡು ಮಗು ತೀರಿಕೊಂಡಿದೆ ಎಂದು ಹೇಳಿದ್ದಾರೆ ಎಂದು ಸುಧಾ ಅವರ ಸಹೋದರ ಸಾಗರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.

ಇನ್ನು ಹೆರಿಗೆ ಕೊಠಡಿಯಲ್ಲಿದ್ದ ಸಿಬ್ಬಂದಿ ಮೊದಲು ಹೇಳಿದ್ದೊಂದು ನಂತರ ಹೇಳಿದ್ದು ಬೇರೆಯಾಗಿದ್ದರಿಂದ ಗಾಬರಿಗೊಂಡ ಸುಧಾ ಪತಿ ಮಲ್ಲೇಶ್, ಮೊದಲು ಗಂಡು ಎಂದು ಈಗ ಹೆಣ್ಣು ಎನ್ನುತ್ತಿರಾ ಎಂದು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರು ವಿಷಯ ಹೇಳಿದ ನಂತರ ಸುಮಾರು ಹೊತ್ತು ನಾನು ಸಂಬಂಧಪಟ್ಟ ವೈದ್ಯರು ಹಾಗೂ ಅಧಿಕಾರಿಗಳನ್ನು ಕಾಣಲು ಯತ್ನಿಸಿದರೂ, ಯಾರೂ ಸಿಗಲಿಲ್ಲ. ಸುಮಾರು 1 ತಾಸಿನ ನಂತರ ಬಂದ ಗೀತಾ ಎಂಬ ವೈದ್ಯರು, ಹೆರಿಗೆ ಮಾಡಿಸಿದ ವೈದ್ಯರು ಯಾರೆಂದು ಹೇಳಲಿಲ್ಲ.

ಶುಕ್ರವಾರ ಬೆಳಿಗ್ಗೆ ಹೆರಿಗೆ ಮಾಡಿದ ವೈದ್ಯರು ಹಾಗೂ ನರ್ಸ್‌ಗಳನ್ನು ಕರೆಯಿಸಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ ತಾಯಿಯ ಸ್ಥಿತಿ ಗಂಭೀರವಾಗುತ್ತಿದ್ದರೂ ಆಕೆಯನ್ನು ನೋಡಿಕೊಳ್ಳಲು ವೈದ್ಯರಿಲ್ಲದೆ, ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾಗರ್ ಆರೋಪಿಸಿದ್ದಾರೆ.

ವೈದ್ಯರಿಂದ ಸೂಕ್ತ ಉತ್ತರ ಬಾರದ ಕಾರಣ ವಿಕ್ಟೋರಿಯಾ ಆಸ್ಪತ್ರೆ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಪೊಲೀಸರು ಆಸ್ಪತ್ರೆಗೆ ಬಂದ ಬಳಿಕವೇ ವೈದ್ಯರು ಎಚ್ಚೆತ್ತು ಬಾಣಂತಿ ಚಿಕಿತ್ಸೆಗೆ ಮುಂದಾದರು.

ಆಗಲೇ ಜನಿಸಿದ ಮಗುವಿನ ಶವ ಪರೀಕ್ಷೆ ನಡೆಸಿ ನಮಗೆ ನೀಡುವುದಾಗಿ ಹೇಳಿದ್ದಾರೆ ಎಂದರು. ಡಿಎನ್‌ಎ ಪರೀಕ್ಷೆ ನಡೆಸಿ ಮಗು ಯಾರದ್ದು ಎನ್ನುವ ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com