ಮಹಿಳಾ ಪೊಲೀಸರೊಂದಿಗೆ ಅಶ್ಲೀಲ ಮಾತು: ಬಂಧನ

ತುರ್ತು ಸಂದರ್ಭದಲ್ಲಿ ನಾಗರಿಕರ ಅನುಕೂಲಕ್ಕಾಗಿ ಇರುವ ಪೊಲೀಸ್ ನಿಯಂತ್ರಣ ಕೊಠಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತುರ್ತು ಸಂದರ್ಭದಲ್ಲಿ ನಾಗರಿಕರ ಅನುಕೂಲಕ್ಕಾಗಿ ಇರುವ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 100ಕ್ಕೆ 200ಕ್ಕೂ ಅಧಿಕ ಬಾರಿ ಕರೆ ಮಾಡಿ, ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ಮಾತನಾಡಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ ವ್ಯಕ್ತಿಯೊಬ್ಬನನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ವಡೇರಹಳ್ಳಿ ನಿವಾಸಿ ವಿನಯ್(30) ಬಂಧಿತ. ಅವಿವಾಹಿತನಾಗಿರುವ ಆತ, ತಾಯಿಯೊಂದಿಗೆ ವಾಸವಿದ್ದ.

ತಾಯಿ ವಡೇರಹಳ್ಳಿಯಲ್ಲಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದು ಆರೋಪಿ ಆಗಾಗ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಿದ್ದ. ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 100ಕ್ಕೆ ಉಚಿತ ಕರೆ ಸೌಲಭ್ಯ ಹಿನ್ನೆಲೆಯಲ್ಲಿ ಪ್ರತಿದಿನ ಸುಮ್ಮನೆ ಡಯಲ್ ಮಾಡುತ್ತಿದ್ದ. ಈ ವೇಳೆ ಸಿಬ್ಬಂದಿ ಕರೆ ಸ್ವೀಕರಿಸಿದರೆ, ಅವರೊಂದಿಗೆ ಕೆಟ್ಟದಾಗಿ ಮಾತನಾಡುತ್ತಾ ನಿಂದಿಸುತ್ತಿದ್ದ.

ಆರೋಪಿ ಹಲವು ಬಾರಿ ಈ ರೀತಿ ಕರೆ ಮಾಡಿ ಮಾತನಾಡಿದ್ದ. ಮಾನಸಿಕ ಅಸ್ವಸ್ಥ ಇರಬಹುದು ಎಂದು ಪೊಲೀಸರು ತಲೆ ಕೆಡಿಸಿಕೊಳ್ಳದೇ ಕರೆ ಕಟ್ ಮಾಡಿದ್ದರು. ಕರೆಗಳು ನಿರಂತರವಾದಾಗ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಸುಮ್ಮನಾಗದ ವಿನಯ್, ಕರೆ ಮಾಡಿ ಅಶ್ಲೀಲ ಪದಗಳಲ್ಲಿ ಮಾತನಾಡವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಬೇಸತ್ತ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಕಿರುಕುಳ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಸಂಬಂಧ ದೂರು ದಾಖಲಿಸಿದ್ದರು ಎಂದು ಕಬ್ಬನ್‌ಪಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ಆರೋಪಿ ವಿನಯ್‌ನನ್ನು ಬಂಧಿಸಿದ್ದಾರೆ.

ಆರೋಪಿಯ ವಿಚಿತ್ರ ವರ್ತನೆಗೆ ಕಾರಣ ತಿಳಿದು ಬಂದಿಲ್ಲ. ಏಕೆ ಕರೆ ಮಾಡುತ್ತಿಯಾ ಎಂದು ಕೇಳಿದರೆ ಹೇಳುತ್ತಿಲ್ಲ. ಕೆಲವರು ವಿಕೃತ ಖುಷಿಗಾಗಿ ಈ ರೀತಿ ಮಾತನಾಡುತ್ತಾರೆ. ಆತ ಅಸ್ವಸ್ಥತೆಯಿಂದ ಬಳಲುತ್ತಿರುವ ಯಾವುದೇ ಲಕ್ಷಣಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com