
ಬೆಂಗಳೂರು: ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ಕಳುಹಿಸದ ಕಾಲೇಜುಗಳಿಗೆ ಸ್ಥಳೀಯ ವಿಚಾರಣಾ ಸಮಿತಿ ಭೇಟಿ ನೀಡುವುದಿಲ್ಲ. ಆ ಮೂಲಕ ಅನುಮೋದನೆ ನಿರಾಕರಿಸಲಾಗುವುದು ಮತ್ತು ಅಂತಹ ಕಾಲೇಜುಗಳ ಫಲಿತಾಂಶ ತಡೆ ಹಿಯಿಯಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ.
ಶುಕ್ರವಾರ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಸಿಂಡಿಕೇಟ್ ಸಭೆಯ ನಿರ್ಣಯಗಳನ್ನು ವಿವರಿಸಿದ ಸಂದರ್ಭದಲ್ಲಿ ಕುಲಪತಿ ಡಾ.ಬಿ ತಿಮ್ಮೇಗೌಡ ಈ ವಿಷಯ ತಿಳಿಸಿದರು. ಮೌಲ್ಯಮಾಪನಕ್ಕೆ ಕಾಲೇಜುಗಳಿಂದ ಅತಿ ಕಡಿಮೆ ಸಂಖ್ಯೆಯಲ್ಲಿ ಉಪನ್ಯಾಸಕರು ಹಾಜರಾಗುವುದರಿಂದ ಪದವಿ ಫಲಿತಾಂಶ ನೀಡುವಲ್ಲಿ ವಿಳಬಂವಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.
ಮೌಲ್ಯಮಾಪನವನ್ನು ವಿಕೇಂದ್ರಿಕೃತ ವ್ಯವಸ್ಥೆಗೆ ತರಲಾಗಿದೆ. ವಿಕೇಂದ್ರೀಕೃತ ವ್ಯವಸ್ಥೆಯ ಮೌಲ್ಯಮಾಪನದಿಂದ ಶೀಘ್ರವಾಗಿ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ ಎಂದರು.
ವಿವಿಯಲ್ಲಿ ಅಪೂರ್ಣಗೊಂಡಿರುವ ಕಟ್ಟಡಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತಾಂತ್ರಿಕೆ ಸಲಹಾ ಸಮಿತಿ ರಚಿಸಲಾಗವುದು. ಈ ಸಮಿತಿ ಕಾಮಗಾರಿ ಸಮತಿಗೆ ವರದಿ ನೀಡಲಿದೆ. ಡಿ.23ಕ್ಕೆ ಕಾಮಗಾರಿ ಸಮಿತಿ ಸಭೆ ಸೇರಲಿದ್ದು ಸಂಪೂರ್ಣ ವರದಿ ನೀಡಲಿದೆ. ಈ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ವಿವಿ ವಿದ್ಯಾರ್ಥಿಗಳಿಗೆ ಬಸ್‌ಮಾರ್ಗ್ ಕಲ್ಪಿಸುವ ನಿಟ್ಟಿನಲ್ಲಿ ರಿಂಗ್ ರಸ್ತೆ ಬಳಿ ಬಿಎಂಟಿಸಿಗೆ 2 ಎಕರೆ ಸ್ಥಳ ನೀಡಲಾಗುವುದು. ಅದರೊಂದಿಗೆ ಎನ್‌ಸಿಸಿ ಘಟಕ ಸ್ಥಾಪನಗೆ 2 ಎಕರೆ ಭೂಮಿ ನೀಡಲಾಗುವುದು ಎಂದು ತಿಳಿಸಿದರು.
ಬಿಎನ್‌ಎಂ, ಸುರಾನಾ ಕಾಲೇಜು ಹಾಗೂ ನ್ಯೂ ಹಾರಿಜನ್ ಕಾಲೇಜಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಿದ್ದು, ಅದು ನೀಡುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸುವರ್ಣ ಮಹೋತ್ಸವದ ಅಂಗವಾಗಿ ಭವನ ನಿರ್ಮಿಸಲು 21 ಕೋಟಿ ಅಗತ್ಯವಿದ್ದು ಸರ್ಕಾರಕ್ಕೆ 10 ಕೋಟಿ ರೂಪಾಯಿ ಕೇಳಲಾಗಿದೆ. ಈ ನಿಟ್ಟಿನಲ್ಲಿ ದಾನಿಗಳು ಹಣ ನೀಡಬೇಕೆಂದು ಕೋರಿದರು.
ವಿವಿ ವ್ಯಾಪ್ತಿಯ 3 ಕಾಲೇಜುಗಳು ಸ್ವಯಂಪ್ರೇರಿತವಾಗಿ ಮುಚ್ಚಿವೆ. ಗಂಗಾ ಕಾವೇರಿ, ವಿವಿಎನ್ ಪದವಿ ಕಾಲೇಜು ಹಾಗೂ ಪದ್ಮಶ್ರೀ ಬಿಇಡಿ ಕಾಲೇಜು ಸೇರಿದೆ. ಹಂಗಾಮಿ ಕುಲಸಚಿವೆ ಡಾ.ಕೆ.ಕೆ ಸೀತಮ್ಮ, ಮೌಲ್ಯಮಾಪನ ಕುಲಸಚಿವ ಡಾ.ಕೆ.ಎನ್. ನಿಂಗೇಗೌಡ ಉಪಸ್ಥಿತರಿದ್ದರು.
Advertisement