ಮಂಡ್ಯ: ಸಹಕಾರಿ ಸಕ್ಕರೆ ಕಾರ್ಖಾನೆ ತನ್ನ ಕಬ್ಬಿನ ಬೆಳೆಯನ್ನು ಕೊಳ್ಳಲು ನಿರಾಕರಿಸಿದ್ದಕ್ಕೆ ಪಾಂಡವಪುರ ತಾಲ್ಲೂಕಿನ ನಿಲನಹಳ್ಳಿ ಗ್ರಾಮದ ರೈತನೊಬ್ಬ ತನ್ನ ಇಡೀ ಬೆಳೆಯನ್ನು ಬೆಂಕಿ ಹಾಕಿ ಸುಟ್ಟ ಘಟನೆ ನಡೆದಿದೆ.
ಒಂದು ಎಕರೆ ಜಾಗದಲ್ಲಿ ಸುಮಾರು ೨.೫ ಲಕ್ಷ ರೂ ಬೆಲೆ ಬಾಳುವ ಕಬ್ಬಿನ ಬೆಳೆಯನ್ನು ಭೋಜೇಗೌಡ ಅವರು ಭಾನುವಾರ ಸುಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಪ್ರಕರಣದಲ್ಲಿ ಮತ್ತೊಬ್ಬ ರೈತ ಎನ್ ಕೆ ಪ್ರಕಾಶ್ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ೧೦೦ ಟನ್ ಕಬ್ಬನ್ನು ಪೂರೈಸುವ ಪರವಾನಗಿ ಹೊಂದಿದ್ದರು. ಡಿಸೆಂಬರ್ ೭ ರಂದು ಪ್ರಕಾಶ್ ಅವರು ಕಾರ್ಖಾನೆಗೆ ಒಂದು ಲೋಡು ಕಬ್ಬನ್ನು ಪೂರೈಸಿದ್ದರು. ನಂತರ ಇನ್ನುಳಿದ ೪ ಲೋಡು ಕಬ್ಬನ್ನು ಕಾರ್ಖಾನೆಗೆ ಕೊಂಡೊಯ್ದ ಮೇಲೆ ಕಾರ್ಖಾನೆ ಅಧಿಕಾರಿಗಳು ಕಬ್ಬನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಗ್ರಾಮಸ್ಥರು ದೂರಿದ್ದಾರೆ. ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಈ ರೈತರು ೨೦ ವರ್ಷಗಳಿಂದ ಕಬ್ಬನ್ನು ಪೂರೈಸುತ್ತಿದ್ದರು ಎಂದು ತಿಳಿಸಿದ್ದಾರೆ.
ಇದರ ಬಗ್ಗೆ ರೈತರು ಪ್ರಶ್ನಿಸಿದಾಗ, ಮೈಸೂರು ಉಪ ಆಯುಕ್ತ ಶಿಖಾ ಅವರು ಮಂಡ್ಯ ರೈತರಿಂದ ಕಬ್ಬನ್ನು ಸ್ವೀಕರಿಸದಂತೆ ಆದೇಶ ನೀಡಿದ್ದಾರೆ ಎಂದು ಕಾರ್ಖಾನೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ಪರವಾನಗಿ ಪಡೆದಿರುವುದರಿಂದ ಪಾಂಡವಪುರದ ಕಾರ್ಖಾನೆ ರೈತರಿಂದ ಕಬ್ಬನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಕೊಯ್ಲಿಗೆ ಬಂದಿರುವ ಕಬ್ಬು ಬೆಳೆದಿರುವ ರೈತರು ಚಿಂತಾಕ್ರಾಂತರಾಗಿದ್ದಾರೆ. ನಿಲನಹಳ್ಳಿ ಗ್ರಾಮದ ರೈತರು ಬೆಳೆದಿರುವ ಸುಮಾರು ೨೦೦೦ ಟನ್ ಕಬ್ಬು ಸಕ್ಕರೆ ಕಾರ್ಖಾನೆಗಳ ಸ್ವೀಕೃತಿಗೆ ಕಾಯುವಂತಾಗಿದೆ.
Advertisement